ದಸರಾ: ರಂಗೇರಿದ ಬೆಂಗಳೂರಿನ ಮಾರುಕಟ್ಟೆಗಳು

Update: 2019-10-05 14:54 GMT

ಬೆಂಗಳೂರು, ಅ.5: ನಾಡಹಬ್ಬ ದಸರಾಗೆ ಖರೀದಿಯ ಭರಾಟೆ ಜೋರಾಗಿದ್ದು, ನಗರದ ವಿವಿಧ ಮಾರುಕಟ್ಟೆಗಳಲ್ಲಿ ನಾನಾ ವಸ್ತುಗಳ ಮಾರಾಟ ರಂಗೇರಿದ್ದು, ಬೆಲೆ ಏರಿಕೆಯ ನಡುವೆಯೂ ಗ್ರಾಹಕರು ಖರೀದಿಯಲ್ಲಿ ತೊಡಗಿದ್ದಾರೆ.

ನಗರದ ಕೆ.ಆರ್. ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ, ಯಶವಂತಪುರ, ಗಾಂಧೀಬಜಾರ್, ಮಲ್ಲೇಶ್ವರಂ ಸೇರಿದಂತೆ ನಾನಾ ಮಾರುಕಟ್ಟೆಗಳು ಹೂವು, ಹಣ್ಣು, ಬೂದಕುಂಬಳ, ನಿಂಬೆ ಹಣ್ಣುಗಳಿಂದ ಕಳೆಗಟ್ಟಿವೆ.

ಸೋಮವಾರ ಆಯುಧಪೂಜೆ ಹಾಗೂ ಮಂಗಳವಾರ ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ಇವೆರಡಕ್ಕೂ ಮುನ್ನ ರವಿವಾರ ಹಾಗೂ ಶನಿವಾರಗಳಿದ್ದು, ಸತತ ನಾಲ್ಕು ದಿನಗಳ ರಜೆಯಿದೆ. ಆದುದರಿಂದ ಅನೇಕರು ಮಾರುಕಟ್ಟೆಗಳಿಗೆ ಆಗಮಿಸಿದ್ದರು.

ಈಗಾಗಲೇ ಹಲವೆಡೆ ವ್ಯಾಪಾರಿ ಮಳಿಗೆ, ಗೋದಾಮು, ಕಚೇರಿ, ವಾಹನಗಳಿಗೆ ಪೂಜೆ ಸಲ್ಲಿಸಿದ್ದಾರೆ. ಇನ್ನು ಕೆಲವರು ಹಬ್ಬದ ದಿನ ಪೂಜೆ ಸಲ್ಲಿಸಲಿದ್ದಾರೆ. ಹೀಗಾಗಿ ಅವರವರ ಪೂಜಾ ದಿನಕ್ಕೆ ಅನುಕೂಲವಾಗುವಂತೆ ಹೂವು, ಹಣ್ಣು, ಸಿಹಿ ಮತ್ತಿತರ ಅಗತ್ಯ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ.

ಸ್ಪರ್ಧೆಗಿಳಿದ ಹೂಗಳು: ಕನಕಾಂಬರ ಮತ್ತು ಮಲ್ಲಿಗೆ ಹೂವುಗಳು ಸ್ಪರ್ಧೆಗಿಳಿದಂತೆ ಬೆಲೆ ಏರಿಕೆಯಲ್ಲಿ ಮುಂಚೂಣಿಯಲ್ಲಿವೆ. ಕನಕಾಂಬರ ಹೂವಿನ ದರ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 1 ಸಾವಿರ ರೂ.ನಿಂದ 1,500 ರೂ.ವರೆಗೆ ಇದ್ದರೆ, ಮಲ್ಲಿಗೆ ಹೂವಿನ ದರವೂ 1,000 ರೂ. ತಲುಪಿದೆ.

ಸೇವಂತಿಗೆ, ಗುಲಾಬಿ ಹೂವುಗಳ ಬೆಲೆಯೂ 160-300 ರೂ.ವರೆಗೆ ಇದ್ದರೆ, ಒಂದು ಮಾರು ಸೇವಂತಿಗೆ ಹೂವು ಗುಣಮಟ್ಟದ ಆಧಾರದ ಮೇಲೆ 100 ರೂ. ನಿಂದ 150 ರೂ.ವರೆಗೆ ಇದೆ. ಈ ಹಬ್ಬಕ್ಕೆ ವಾಹನಗಳಿಗೆ ಹೂವಿನ ಹಾರಗಳನ್ನು ಹೆಚ್ಚಾಗಿ ಬಳಸುವುದರಿಂದ ಸುಗಂಧರಾಜ ಹೂವಿಗೆ ಹೆಚ್ಚು ಬೇಡಿಕೆ. ಈ ಹಿನ್ನೆಲೆಯಲ್ಲಿ ಕೆ.ಜಿ.ಗೆ 300 ರೂ. ಬೆಲೆಯಿದೆ.

ಏರಿದ ನಿಂಬೆ, ಬೂದಗುಂಬಳ ಬೆಲೆ: ದಸರಾ ಹಬ್ಬಕ್ಕೆಂದು ಪ್ರತಿ ವರ್ಷ ತಮಿಳುನಾಡು, ಆಂಧ್ರಪ್ರದೇಶದಿಂದ ರಾಶಿಗಟ್ಟಲೆ ಬೂದಗುಂಬಳಕಾಯಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈ ಬಾರಿ ಎಲ್ಲೆಡೆ ಮಳೆಯ ಹಾವಳಿಯಿರುವುದರಿಂದ ಬೂದಗುಂಬಳ ಬೆಳೆಗೆ ಹಾನಿಯಾಗಿದೆ. ಹೀಗಾಗಿ ಇದರ ಬೆಲೆ ಕೆ.ಜಿ.ಗೆ 20 -25 ರೂ.ವರೆಗೆ ಮಾರಾಟವಾಗುತ್ತಿದ್ದು, ಒಂದು ಕಾಯಿಗೆ 80 ರೂ.ನಿಂದ 150 ರೂ.ವರೆಗೆ ಇದೆ. ಅದೇ ರೀತಿ ನಿಂಬೆಹಣ್ಣಿನ ದರದಲ್ಲೂ ಭಾರೀ ಏರಿಕೆಯಾಗಿದೆ.

ಮಾರುಕಟ್ಟೆಯಲ್ಲಿ ಹೂವಿನ ಸಗಟು ದರ (ಕೆ.ಜಿ.ಗಳಲ್ಲಿ)

ಕನಕಾಂಬರ 1,000-1500

ಮಲ್ಲಿಗೆ 1000 ರೂ.

ಕಾಕಡ 400-600 ರೂ.

ಗುಲಾಬಿ 160-200 ರೂ.

ಸುಗಂಧ ರಾಜ 300 ರೂ.

ಸೇವಂತಿಗೆ 160-300 ರೂ.

ಚೆಂಡು ಹೂವು 25-40 ರೂ.

ಸೇವಂತಿ ಹೂವು ಮಾರು 100-150 ರೂ.

ಹಣ್ಣುಗಳ ದರ (ಕೆ.ಜಿ.ಗಳಲ್ಲಿ)

ಏಲಕ್ಕಿ ಬಾಳೆ 82 ರೂ.

ಪಚ್ಚಬಾಳೆ 30 ರೂ.

ಮೂಸಂಬಿ 90 ರೂ.

ಸೀಬೆ 82 ರೂ.

ಸಪೋಟ 52 ರೂ.

ಸೀತಾಲ 90 ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News