ಎಟಿಪಿ ಚಾಲೆಂಜರ್: ಸುಮಿತ್ ಸೆಮಿ ಫೈನಲ್‌ಗೆ

Update: 2019-10-05 18:09 GMT

ಕ್ಯಾಂಪಿನಾಸ್(ಬ್ರೆಝಿಲ್), ಅ.5: ಭಾರತದ ಉದಯೋನ್ಮುಖ ಟೆನಿಸ್ ಸ್ಟಾರ್ ಸುಮಿತ್ ನಗಾಲ್ ಶನಿವಾರ ಎಟಿಪಿ ಚಾಲೆಂಜರ್ ಕ್ಯಾಂಪಿನಾಸ್‌ನಲ್ಲಿ ಸೆಮಿ ಫೈನಲ್ ತಲುಪಿದ್ದಾರೆ. ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನದ ಫ್ರಾನ್ಸಿಸ್ಕೋ ಸೆರುಂಡೊಲೊರನ್ನು 7-6(2), 7-5 ಸೆಟ್‌ಗಳಿಂದ ಮಣಿಸಿದ ನಗಾಲ್ ಎರಡು ವಾರಗಳಲ್ಲಿ ಎರಡನೇ ಬಾರಿ ಅಂತಿಮ-4ರ ಸುತ್ತಿನಲ್ಲಿ ಕಾಣಿಸಿಕೊಂಡಿದ್ದಾರೆ.

ನಗಾಲ್ ಸೆಮಿ ಫೈನಲ್‌ನಲ್ಲಿ ಅರ್ಜೆಂಟೀನದ ಜುಯಾನ್ ಫಿಕೊವಿಚ್ ಸವಾಲು ಎದುರಿಸಲಿದ್ದಾರೆ.

ಈ ವಾರಾರಂಭದಲ್ಲಿ ಅರ್ಜೆಂಟೀನದ ಫಕುಂಡೊ ಬಾಗ್ನಿಸ್‌ರನ್ನು 6-4, 6-2 ನೇರ ಸೆಟ್‌ಗಳಿಂದ ಸೋಲಿಸಿದ್ದ ನಡಾಲ್ ಬ್ಯುನಸ್ ಐರಿಸ್ ಎಟಪಿ ಚಾಲೆಂಜರ್ ಪ್ರಶಸ್ತಿ ಜಯಿಸಿದ್ದರು. ಇದು ಅವರ ಎರಡನೇ ಚಾಲೆಂಜರ್ ಪ್ರಶಸ್ತಿಯಾಗಿತ್ತು. ಈ ಸಾಧನೆಯ ಮೂಲಕ ಎಪಿಟಿ ರ್ಯಾಂಕಿಂಗ್‌ನಲ್ಲಿ 26 ಸ್ಥಾನ ಭಡ್ತಿ ಪಡೆದು 135ನೇ ಸ್ಥಾನಕ್ಕೇರಿದರು. ನಗಾಲ್ 2017ರಲ್ಲಿ ಬೆಂಗಳೂರು ಚಾಲೆಂಜರ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿದ್ದರು. ಆಗಸ್ಟ್‌ನಲ್ಲಿ ನಡೆದ ಯುಎಸ್ ಓಪನ್‌ನಲ್ಲಿ ಸ್ವಿಸ್ ದಂತಕತೆ ರೋಜರ್ ಫೆಡರರ್‌ರನ್ನು ಮೊದಲ ಸುತ್ತಿನಲ್ಲಿ ಎದುರಿಸಿದ್ದ ನಡಾಲ್ 6-4, 1-6, 2-6, 4-6 ಸೆಟ್‌ಗಳಿಂದ ಸೋತಿದ್ದರೂ ಉತ್ತಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದರು. ಮೊದಲ ಸೆಟ್‌ನ್ನು 6-4 ಅಂತರದಿಂದ ಗೆದ್ದುಕೊಂಡಿದ್ದ ನಗಾಲ್ 20 ವರ್ಷಗಳ ಬಳಿಕ ಗ್ರಾನ್‌ಸ್ಲಾಮ್ ಟೂರ್ನಿಯ ಪ್ರಮುಖ ಸುತ್ತಿನಲ್ಲಿ ಸೆಟ್ ಗೆದ್ದುಕೊಂಡ ಭಾರತದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News