ಮುತ್ತಯ್ಯ ಮುರಳೀಧರನ್ ವಿಶ್ವ ದಾಖಲೆ ಸರಿಗಟ್ಟಿದ ಅಶ್ವಿನ್

Update: 2019-10-06 06:08 GMT

ಹೊಸದಿಲ್ಲಿ, ಅ.6: ಭಾರತದ ಸ್ಪಿನ್ ಕಿಂಗ್ ಆರ್.ಅಶ್ವಿನ್ ರವಿವಾರ ಶ್ರೀಲಂಕಾದ ಮಾಜಿ ಖ್ಯಾತ ಬೌಲರ್ ಮುತ್ತಯ್ಯ ಮುರಳೀಧರನ್ ಅವರ ವಿಶ್ವದಾಖಲೆಯೊಂದನ್ನು ಸರಿಗಟ್ಟಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 350 ವಿಕೆಟ್‌ಗಳನ್ನು ಪೂರೈಸುವ ಮೂಲಕ ಈ ಸಾಧನೆ ಮಾಡಿದರು.

ವಿಶಾಖಪಟ್ಟಣದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ 5ನೇ ಹಾಗೂ ಕೊನೆಯ ದಿನವಾದ ರವಿವಾರ ಆಫ್ ಸ್ಪಿನ್ನರ್ ಅಶ್ವಿನ್ ಅವರು ಥ್ಯೂನಿಸ್ ಡಿಬ್ರೂನ್(10 ರನ್) ವಿಕೆಟನ್ನು ಪಡೆದು 350 ವಿಕೆಟ್ ಪೂರೈಸಿದರು.

ಅಶ್ವಿನ್ 66ನೇ ಪಂದ್ಯದಲ್ಲಿ 350 ವಿಕೆಟ್ ಪೂರೈಸಿದರು. ಮುರಳೀಧರನ್ ಕೂಡ 350 ವಿಕೆಟ್ ಪೂರೈಸಲು 66 ಪಂದ್ಯಗಳನ್ನಾಡಿದ್ದರು. ಒಟ್ಟು 349 ವಿಕೆಟ್‌ಗಳನ್ನು ಪಡೆದಿದ್ದ ಚೆನ್ನೈ ಸ್ಪಿನ್ನರ್ ಅಶ್ವಿನ್‌ಗೆ ಮುರಳೀಧರನ್ ವಿಶ್ವ ದಾಖಲೆ ಸರಿಗಟ್ಟಲು ಒಂದು ವಿಕೆಟ್ ಅಗತ್ಯವಿತ್ತು. ಮುರಳೀಧರನ್ 2001ರಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ 66ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.

ಅಶ್ವಿನ್ ಅವರು ಭಾರತದ ಪರ ವೇಗವಾಗಿ 350 ವಿಕೆಟ್ ಪೂರೈಸಿದ್ದ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದರು. ಕುಂಬ್ಳೆ 77 ಪಂದ್ಯಗಳಲ್ಲಿ ಈ ಮೈಲುಗಲ್ಲು ತಲುಪಿದ್ದರು. ಸ್ಪಿನ್ ಲೆಜೆಂಡ್ ಮುರಳೀಧರನ್ 2010ರಲ್ಲಿ ನಿವೃತ್ತಿಯಾಗುವ ವೇಳೆಗೆ ಟೆಸ್ಟ್‌ನಲ್ಲಿ 800 ವಿಕೆಟ್‌ಗಳನ್ನು ಪಡೆದಿದ್ದರು.

  33ರ ಹರೆಯದ ಅಶ್ವಿನ್ 2017ರ ಜುಲೈ ಬಳಿಕ ಕೇವಲ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ದೀರ್ಘ ಸಮಯದ ಬಳಿಕ ಟೀಮ್ ಇಂಡಿಯಾಕ್ಕೆ ದ.ಆಫ್ರಿಕಾ ಸರಣಿಗೆ ವಾಪಸಾಗಿರುವ ಅಶ್ವಿನ್ ಮೊದಲ ಇನಿಂಗ್ ್ಸಲ್ಲಿ 145 ರನ್‌ಗೆ 7 ವಿಕೆಟ್‌ಗಳನ್ನು ಪಡೆದಿದ್ದರು. ಅಶ್ವಿನ್ ಟೆಸ್ಟ್‌ನಲ್ಲಿ 27ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News