​ಅಧಿವೇಶನ ವಿಸ್ತರಣೆಗೆ ವಿಪಕ್ಷಗಳ ಒತ್ತಾಯ

Update: 2019-10-07 10:15 GMT

ಬೆಂಗಳೂರು, ಅ. 7: ನೆರೆ ಮತ್ತು ಬರ ಪರಿಸ್ಥಿತಿ ಸೇರಿದಂತೆ ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಪರಿಹಾರ ಕಲ್ಪಿಸುವ ದೃಷ್ಟಿಯಿಂದ ವಿಧಾನ ಮಂಡಲ ಉಭಯ ಸದನಗಳ ಅಧಿವೇಶನದ ಅವಧಿಯನ್ನು ವಿಸ್ತರಣೆ ಮಾಡಬೇಕೆಂದು ವಿಪಕ್ಷಗಳು ಒತ್ತಾಯಿಸಿವೆ.

ಅ.10 ರಿಂದ ಆರಂಭಗೊಳ್ಳಲಿರುವ ಉಭಯ ಸದನಗಳ ಅಧಿವೇಶನ ಅ.12ರ ವರೆಗೆ (ಮೂರು ದಿನಗಳ ಕಾಲ) ನಡೆಯಲಿದ್ದು, ಈ ವೇಳೆ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಬಜೆಟ್ ಅನುಮೋದನೆ ಪಡೆದುಕೊಳ್ಳಬೇಕಿದೆ. ಹೀಗಾಗಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯಬೇಕಿದ್ದ ಅಧಿವೇಶನ ಕಲಾಪವನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ.

ಕೇವಲ 3 ದಿನ ಅಧಿವೇಶನ ನಡೆಸಿ ಬಜೆಟ್‌ಗೆ ಒಪ್ಪಿಗೆ ಪಡೆಯುವುದು ಸಲ್ಲ. ಹೀಗಾಗಿ ಕನಿಷ್ಠ ಹತ್ತು ದಿನಗಳ ಅಧಿವೇಶನ ನಡೆಸಬೇಕು. ಪ್ರಸ್ತುತ ನಿಗದಿಪಡಿಸಿರುವ ಅಧಿವೇಶನವನ್ನು ವಿಸ್ತರಣೆ ಮಾಡಬೇಕು ಎಂದು ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಮನವಿ ಮಾಡಿವೆ.

ಉತ್ತರ ಕರ್ನಾಟಕ, ಕರಾವಳಿ ಸೇರಿ ರಾಜ್ಯದ 18ಕ್ಕೂ ಹೆಚ್ಚು ಜಿಲ್ಲೆಗಳ 120ಕ್ಕೂ ಹೆಚ್ಚು ತಾಲೂಕುಗಳಲ್ಲಿ ಭೀಕರ ಸ್ವರೂಪದ ನೆರೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಕೇಂದ್ರ ಸರಕಾರವು ನೆರೆ ಬಂದ 2 ತಿಂಗಳ ಬಳಿಕ ‘ಆನೆ ಹೊಟ್ಟೆಗೆ ಅರೇಕಾಸಿನ ಮಜ್ಜಿಗೆ ಎಂಬಂತೆ’ ಕೇವಲ 1,200 ಕೋಟಿ ರೂ.ಗಳನ್ನಷ್ಟೇ ಬಿಡುಗಡೆ ಮಾಡಿದ್ದು, ರಾಜ್ಯಕ್ಕೆ ಸೂಕ್ತ ನೆರವು ನೀಡಿಲ್ಲ. ಹೀಗಾಗಿ ಈ ಬಗ್ಗೆ ಕಲಾಪದಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಸರಕಾರವನ್ನು ಅಡ್ಡಕತ್ತರಿಯಲ್ಲಿ ಸಿಲುಕಿಸಲು ವಿಪಕ್ಷಗಳ ಸಿದ್ದತೆ ನಡೆಸಿವೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ವಿಪಕ್ಷಗಳ ನಾಯಕರು ಅಧಿವೇಶನ ಕಲಾಪದ ಅವಧಿಯನ್ನು ಕನಿಷ್ಠ ಇನ್ನೂ ಒಂದು ವಾರದ ಮಟ್ಟಿಗೆ ವಿಸ್ತರಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

‘ಅಧಿವೇಶನದ ಸಂದರ್ಭ ವಿಧಾನಸಭಾ ಸ್ಪೀಕರ್ ಅಧ್ಯಕ್ಷತೆಯಲ್ಲಿ ಸದನ ಕಲಾಪಗಳ ಸಲಹಾ ಸಮಿತಿ (ಬಿಎಸ್ಸಿ) ಸಭೆಯಲ್ಲಿ ಅಧಿವೇಶನ ಕಲಾಪ ವಿಸ್ತರಣೆ ಸಂಬಂಧ ಆಡಳಿತ ಮತ್ತು ವಿಪಕ್ಷಗಳ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು’

-ಬಿ.ಎಸ್.ಯಡಿಯೂರಪ್ಪ ಮುಖ್ಯಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News