ನೋಟು ರದ್ದತಿಯಿಂದ ಭಾರತದ ಆರ್ಥಿಕತೆಗೆ ಹೊಡೆತ, ಉದ್ಯೋಗ ನಷ್ಟ: ಆರ್ಥಿಕ ತಜ್ಞರ ನೂತನ ಅಧ್ಯಯನ ವರದಿ

Update: 2019-10-07 12:16 GMT

ಹೊಸದಿಲ್ಲಿ, ಅ.7: ನರೇಂದ್ರ ಮೋದಿಯವರು ಘೋಷಿಸಿದ ನೋಟು ನಿಷೇಧವು ದೇಶದ ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸುವುದರ ಜತೆಗೆ ಆ ನಿರ್ದಿಷ್ಟ ತ್ರೈಮಾಸಿಕದಲ್ಲಿ ಕನಿಷ್ಠ ಶೇ.2ರಿಂದ 3ರಷ್ಟು ಉದ್ಯೋಗ ಕಡಿತಕ್ಕೆ ಕಾರಣವಾಗಿತ್ತು ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಗೇಬ್ರಿಯಲ್ ಚೊಡೊರೊವ್ ರೀಚ್, ಐಎಂಎಫ್ ಆರ್ಥಿಕ ಸಲಹೆಗಾರರೂ, ಅದರ ಸಂಶೋಧನಾ ವಿಭಾಗದ ನಿದೇರ್ಶಕರೂ ಆಗಿರುವ  ಗೀತಾ ಗೋಪಿನಾಥ್, ಭಾರತೀಯ ರಿಸರ್ವ್ ಬ್ಯಾಂಕ್ ನ ಅಭಿನವ್ ನಾರಾಯಣನ್ ಹಾಗೂ ಗೋಲ್ಡ್ ಮ್ಯಾನ್ ಸ್ಯಾಕ್ಸ್ ಕಂಪೆನಿಯ ಪ್ರಾಚಿ ಮಿಶ್ರಾ ಅವರು ಸಿದ್ಧಪಡಿಸಿದ ಅಧ್ಯಯನಾ ವರದಿ ತಿಳಿಸಿದೆ.

ಅಮಾನ್ಯೀಕರಣವು ಭಾರತದ ಉದ್ಯಮಗಳು ಹಾಗೂ ಜನರಿಗೆ ದೊಡ್ಡ ಆಘಾತ ಉಂಟು ಮಾಡಿತ್ತು ಹಾಗೂ ದೊಡ್ಡ ಮಟ್ಟದ ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ ಎಂದು 'ಕ್ಯಾಶ್ ಎಂಡ್ ಇಕಾನಮಿ : ಎವಿಡೆನ್ಸ್ ಫ್ರಮ್ ಇಂಡಿಯಾಸ್ ಡಿಮಾನಿಟೈಸೇಶನ್' ಎಂಬ ಹೆಸರಿನ ಈ  ವರದಿಯಲ್ಲಿ ತಿಳಿಸಲಾಗಿದೆ.

ಅಮಾನ್ಯೀಕರಣದಿಂದ ಭಾರತದ ವಿವಿಧ ಜಿಲ್ಲೆಗಳ ಮೇಲೆ ಉಂಟಾದ ಪರಿಣಾಮಗಳನ್ನು ಅವಲೋಕಿಸಿದ ಈ ವರದಿ, "ಅಮಾನ್ಯೀಕರಣದಿಂದ ತೀವ್ರ ಬಾಧಿತ ಜಿಲ್ಲೆಗಳಲ್ಲಿ ಎಟಿಎಂನಿಂದ ಹಣ ವಿದ್ ಡ್ರಾ ಮಾಡುವ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ ಹಾಗೂ ಇತರ ಪಾವತಿ ಆಯ್ಕೆಗಳಾದ ಮೊಬೈಲ್ ವ್ಯಾಲೆಟ್ ಮುಂತಾದವುಗಳ ಬಳಕೆ ಹೆಚ್ಚಿಸಿತು'' ಎಂದು ವರದಿ ತಿಳಿಸಿದೆ.

ಅಮಾನ್ಯೀಕರಣ ಜಾರಿಯಾದ ನವೆಂಬರ್ ಹಾಗೂ ನಂತರ ಡಿಸೆಂಬರ್ 2016ರಲ್ಲಿ ದೇಶದ ಆರ್ಥಿಕ ಚಟುವಟಿಕೆಗಳು ಶೇ 2.2ರಷ್ಟು ಕಡಿಮೆಯಾದವು ಎಂದು ವರದಿಯಲ್ಲಿ ಹೇಳಲಾಗಿದೆ.

ಅಮಾನ್ಯೀಕರಣದಿಂದಾಗಿ ಸಾಲ ನೀಡಿಕೆ ಪ್ರಮಾಣ ಕೂಡ  ಆ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಶೇ. 2ರಷ್ಟು ಕಡಿಮೆಯಾಗಿದೆ, ನೋಟು ಅಮಾನ್ಯೀಕರಣ ಘೋಷಣೆಗೆ ಮುನ್ನ ಸಾಕಷ್ಟು ಹೊಸ ನೋಟುಗಳನ್ನು ಮುದ್ರಿಸಿ ರಿಸರ್ವ್ ಬ್ಯಾಂಕ್ ಸಿದ್ಧವಾಗಿಟ್ಟುಕೊಳ್ಳದೇ ಇದ್ದುದರಿಂದ ಹಾಗೂ ಆರ್‍ ಬಿಐ ಹಾಗೂ ಸರಕಾರ ಅಮಾನ್ಯೀಕರಣ ಕುರಿತಂತೆ ಗೌಪ್ಯತೆ ಕಾಪಾಡಿಕೊಂಡಿದ್ದರಿಂದ ಅಮಾನ್ಯೀಕರಣ ಜಾರಿಯಾದ ಕೂಡಲೇ ನಗದು ಕೊರತೆ ಉದ್ಭವವಾಗಿತ್ತು, ಒಟ್ಟು ನಗದು ರಾತ್ರಿ ಬೆಳಗಾಗುವುದರೊಳಗಾಗಿ ಶೇ.75ರಷ್ಟು ಇಳಿಕೆಯಾಗಿ ಈ ಸಮಸ್ಯೆಯಿಂದ ಸುಧಾರಿಸಿಕೊಳ್ಳಲು ಮುಂದಿನ ಹಲವಾರು ತಿಂಗಳುಗಳೇ ಬೇಕಾದವು ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News