‘ಮನ್ ಕೀ ಬಾತ್’ ‘ಮೌನ್ ಕೀ ಬಾತ್’ ಆಗಲು ಅವಕಾಶ ನೀಡಬೇಡಿ: ಶಶಿ ತರೂರ್

Update: 2019-10-08 16:08 GMT

 ಹೊಸದಿಲ್ಲಿ,ಅ.8: ಗುಂಪಿನಿಂದ ಹಲ್ಲೆಗಳು-ಹತ್ಯೆಗಳು ಹೆಚ್ಚುತ್ತಿರುವ ಬಗ್ಗೆ ಜುಲೈನಲ್ಲಿ ಪ್ರಧಾನಿಯವರಿಗೆ ಬಹಿರಂಗ ಪತ್ರವನ್ನು ಬರೆದಿದ್ದ 49 ಗಣ್ಯರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಿರುವುದನ್ನು ಖಂಡಿಸಿ ಮೋದಿ ಅವರಿಗೆ ಪತ್ರವೊಂದನ್ನು ಬರೆದಿರುವ ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು,ಇದು ಜನರನ್ನು ತೀವ್ರ ಆತಂಕಕ್ಕೆ ತಳ್ಳಿದೆ ಎಂದಿದ್ದಾರೆ.

ಭಿನ್ನಾಭಿಪ್ರಾಯವನ್ನು ಸ್ವಾಗತಿಸುವಂತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಎತ್ತಿ ಹಿಡಿಯವ ತನ್ನ ಬದ್ಧತೆಯ ಬಗ್ಗೆ ದೇಶಕ್ಕೆ ಭರವಸೆ ನೀಡುವಂತೆ ತರೂರ್ ಅವರು ಟ್ವಿಟರ್ ‌ನಲ್ಲಿ ಪೋಸ್ಟ್ ಮಾಡಿರುವ ತನ್ನ ಎರಡು ಪುಟಗಳ ಪತ್ರದಲ್ಲಿ ಮೋದಿ ಅವರನ್ನು ಆಗ್ರಹಿಸಿದ್ದಾರೆ. 49 ಗಣ್ಯರ ವಿರುದ್ಧ ಬಿಹಾರದಲ್ಲಿ ದಾಖಲಾಗಿರುವ ಎಫ್‌ಐಆರ್ ವಿರುದ್ಧ ಬಹಿರಂಗ ನಿಲುವನ್ನು ತಳೆಯುವಂತೆಯೂ ಅವರು ಒತ್ತಾಯಿಸಿದ್ದಾರೆ.

 ಭಾರತೀಯ ಸಂವಿಧಾನದ ವಿಧಿ 19(1)(ಎ) ಪ್ರತಿಯೊಬ್ಬ ಭಾರತೀಯ ಪ್ರಜೆಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ನಾವು ಭಾರತದ ಹೆವ್ಮೆುಯ ಪ್ರಜೆಗಳಾಗಿದ್ದೇವೆ ಮತ್ತು ಅದರ ಸಂವಿಧಾನದಲ್ಲಿ ಹೇಳಲಾಗಿರುವ ಮೌಲ್ಯಗಳನ್ನು ಆರಾಧಿಸುತ್ತೇವೆ. ನಮ್ಮ ದೇಶದ ಪ್ರಧಾನಿಯಾಗಿ ನೀವು ಈ ಮೌಲ್ಯಗಳನ್ನು ರಕ್ಷಿಸಬೇಕೆಂದು ನಾವು ನಿರೀಕ್ಷಿಸುತ್ತಿದ್ದೇವೆ. ಕೋಮುದ್ವೇಷ ಅಥವಾ ಮಕ್ಕಳ ಅಪಹರಣದ ವದಂತಿಗಳಿಂದಾಗಿ ಗುಂಪಿನಿಂದ ಹಲ್ಲೆ ಮತ್ತು ಹತ್ಯೆಗಳು ತ್ವರಿತವಾಗಿ ಹರಡುತ್ತಿರುವ ಪಿಡುಗಾಗಿದೆ ಮತ್ತು ಈ ವಿಷಯವನ್ನು ಬಹಿರಂಗ ಪತ್ರದ ಮೂಲಕ ನಿಮ್ಮ ಗಮನಕ್ಕೆ ತಂದಿರುವ 49 ಗಣ್ಯರು ಸರಿಯಾದ ಕಾರ್ಯವನ್ನೇ ಮಾಡಿದ್ದಾರೆ.

ರಾಷ್ಟ್ರೀಯ ಮಹತ್ವದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನೀವು ನೇತೃತ್ವ ವಹಿಸುವಂತಾಗಲು ಇಂತಹ ವಿಷಯಗಳನ್ನು ನಿರ್ಭೀತಿಯಿಂದ ನಿಮ್ಮ ಗಮನಕ್ಕೆ ತರಲು ಭಾರತೀಯ ಪ್ರಜೆಗಳಾಗಿ ನಾವು ಆಶಿಸುತ್ತೇವೆ. ಭಾರತದ ಉತ್ತಮ ನಾಗರಿಕರ ಮನದ ಮಾತು (ಮನ್ ಕೀ ಬಾತ್) ವೌನದ ಮಾತು (ವೌನ್ ಕೀ ಬಾತ್) ಆಗದಿರಲು ನೀವೂ ಕೂಡ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕನ್ನು ಬೆಂಬಲಿಸುತ್ತೀರಿ ಎಂದು ನಾವು ನಂಬಿದ್ದೇವೆ ಎಂದು ತರೂರ್ ಹೇಳಿದ್ದಾರೆ.

2016ರಲ್ಲಿ ಅಮೆರಿಕದ ಕಾಂಗ್ರೆಸ್‌ನಲ್ಲಿ ಭಾಷಣದ ಸಂದರ್ಭದಲ್ಲಿ ಸಂವಿಧಾನವನ್ನು ‘ಪವಿತ್ರ ಗ್ರಂಥ ’ ಎಂದು ಬಣ್ಣಿಸಿದ್ದ ಮೋದಿಯವರ ಹೇಳಿಕೆಯನ್ನು ನೆನಪಿಸಿರುವ ತರೂರ್,ಆದರೆ ನಿಮ್ಮ ಸರಕಾರದ ಕೆಲವು ಕ್ರಮಗಳು ಈ ಹೇಳಿಕೆಗೆ ವಿರುದ್ಧವಾಗಿವೆ. ಮೂಲಭೂತ ಹಕ್ಕುಗಳ ಕುರಿತು ನಿಮ್ಮ ಅಭಿಪ್ರಾಯವನ್ನು ಬದಲಿಸಿದ್ದೀರಿ ಎನ್ನುವುದು ಇದರ ಅರ್ಥವೇ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News