ಶನಿ ಗ್ರಹದ 20 ನೂತನ ಉಪಗ್ರಹಗಳ ಪತ್ತೆ

Update: 2019-10-08 18:42 GMT

ಕೇಪ್ ಕ್ಯಾನವರಲ್ (ಫ್ಲೋರಿಡ), ಅ. 8: ಕುತೂಹಲಗಳನ್ನು ನಿರಂತರವಾಗಿ ತನ್ನೊಳಗೆ ಹುದುಗಿಸಿಕೊಂಡಿರುವ ಶನಿ ಗ್ರಹದ ಸುತ್ತ ಇನ್ನೂ 20 ಉಪಗ್ರಹಗಳು ತಿರುಗುತ್ತಿವೆ ಎಂದು ವಿಜ್ಞಾನಿಗಳು ಸೋಮವಾರ ತಿಳಿಸಿದ್ದಾರೆ. ಇದರೊಂದಿಗೆ ಉಂಗುರಗಳನ್ನು ಹೊಂದಿರುವ ಗ್ರಹದ ಉಪಗ್ರಹಗಳ ಸಂಖ್ಯೆ 82ಕ್ಕೇರಿದೆ.

ಈ ಮೂಲಕ ಅದು 79 ಉಪಗ್ರಹಗಳನ್ನು ಹೊಂದಿರುವ ಗುರು ಗ್ರಹವನ್ನು ಹಿಂದಿಕ್ಕಿದೆ.

ಆದರೆ, ಗುರು ಗ್ರಹ ಒಂದು ವಿಷಯದಲ್ಲಿ ಸಮಾಧಾನ ಪಟ್ಟುಕೊಳ್ಳಬಹುದು ಎಂದು ಕಾರ್ನೀಜೀ ಇನ್‌ಸ್ಟಿಟ್ಯೂಶನ್ ಫಾರ್ ಸಯನ್ಸ್‌ನ ಖಗೋಳ ವಿಜ್ಞಾನಿ ಸ್ಕಾಟ್ ಶೆಪರ್ಡ್ ಹೇಳಿದರು. ಅಂದರೆ, ಸೌರವ್ಯೆಹದ ಅತಿ ದೊಡ್ಡ ಗ್ರಹ ಗುರು ಈಗಲೂ ಅತಿ ದೊಡ್ಡ ಉಪಗ್ರಹವನ್ನು ಹೊಂದಿದೆ. ಅದರ ಉಪಗ್ರಹ ಗ್ಯಾನಿಮೀಡ್ ಭೂಮಿಯ ಸುಮಾರು ಅರ್ಧದಷ್ಟು ಗಾತ್ರವನ್ನು ಹೊಂದಿದೆ.

ಇದಕ್ಕೆ ಹೋಲಿಸಿದರೆ, ಶನಿ ಗ್ರಹದ ನೂತನ 20 ಉಪಗ್ರಹಗಳು ಅತ್ಯಂತ ಚಿಕ್ಕ ಗಾತ್ರವನ್ನು ಹೊಂದಿವೆ. ಅವುಗಳ ವ್ಯಾಸ ಹೆಚ್ಚೆಂದರೆ 5 ಕಿ.ಮೀ. ಇರಬಹುದು.

ಶೆಪರ್ಡ್ ಮತ್ತು ಅವರ ತಂಡದ ಸದಸ್ಯರು ಹವಾಯಿಯಲ್ಲಿರುವ ಟೆಲಿಸ್ಕೋಪ್ ಮೂಲಕ ಶನಿ ಗ್ರಹದ ನೂತನ 20 ಗ್ರಹಗಳನ್ನು ಪತ್ತೆಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News