ದ.ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ಸ್ಮೃತಿ ಅಲಭ್ಯ

Update: 2019-10-09 01:51 GMT

ವಡೋದರ, ಅ.8: ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದು, ಈ ಬೆಳವಣಿಗೆಯು ಭಾರತೀಯ ಮಹಿಳಾ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ.

23ರ ಹರೆಯದ ಮಂಧಾನ ರವಿವಾರ ನೆಟ್ ಪ್ರಾಕ್ಟೀಸ್ ನಡೆಸುತ್ತಿದ್ದಾಗ ಚೆಂಡು ಕಾಲಿಗೆ ಜೋರಾಗಿ ಬಡಿದ ಕಾರಣ ತೀವ್ರ ಗಾಯಗೊಂಡಿದ್ದರು. ಹೀಗಾಗಿ ಅವರು ಸರಣಿಯಿಂದ ಹೊರಗುಳಿದಿದ್ದಾರೆ. ಮಂಧಾನರಿಂದ ತೆರವಾದ ಸ್ಥಾನವನ್ನು ಆಲ್‌ರೌಂಡರ್ ಪೂಜಾ ವಸ್ತ್ರಕರ್ ತುಂಬಲಿದ್ದಾರೆ.

   ‘‘ಸ್ಮತಿ ಕಾಲ್ಬೆರಳಿನಲ್ಲಿ ಸ್ವಲ್ಪ ಪ್ರಮಾಣದ ಮುರಿತವಾಗಿದೆ. ಅವರಿಗೆ ಇನ್ನಷ್ಟೇ ಎಂಆರ್‌ಐ ಸ್ಕಾನಿಂಗ್ ಆಗಬೇಕಾಗಿದೆ. ಅವರಿಗೆ ಕಾಲ್ವೆರಳಿನಲ್ಲಿ ಸ್ವಲ್ಪ ಊತವಿದೆ. ಎನ್‌ಸಿಎಯಲ್ಲಿ ಫಿಸಿಯೋ ಪರೀಕ್ಷಿಸಿದ ಬಳಿಕ ಅವರು ಯಾವಾಗ ತಂಡಕ್ಕೆ ವಾಪಸಾಗಲಿದ್ದಾರೆೞೞಎಂದು ಎನ್ನುವುದು ಗೊತ್ತಾಗಲಿದೆ’’ ಎಂದು ಮುಖ್ಯ ಕೋಚ್ ಡಬ್ಲು ವಿ ರಾಮನ್ ಹೇಳಿದ್ದಾರೆ.

 ಮಂಧಾನ ಅವರ ಅನುಪಸ್ಥಿತಿಯು ಇತರ ಆಟಗಾರರಿಗೆ ಅವಕಾಶ ಕಲ್ಪಿಸಲಿದೆ ಎಂದ ನಾಯಕಿ ಮಿಥಾಲಿ ರಾಜ್, ‘‘ಅವರು(ಮಂಧಾನ)ಅನುಭವಿ ಆಟಗಾರ್ತಿ. ಆದರೆ, ಇತರ ಆಟಗಾರ್ತಿಯರು ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಇದು ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನ ಭಾಗವಾಗಿಲ್ಲ. ಹೀಗಾಗಿ ಇದು ನಮಗೆ ಹೊಸ ಆಟಗಾರರಿಗೆ ಅವಕಾಶ ನೀಡಲು ಅನುಕೂಲವಾಗಲಿದೆ. ಯಾರೇ ಅವಕಾಶ ಪಡೆದರೂ ಅವರು ಅದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾರೆಂಬ ವಿಶ್ವಾಸ ನನಗಿದೆ’’ ಎಂದು ಹೇಳಿದರು.

ಭಾರತ ಇತ್ತೀಚೆಗೆ ಸೂರತ್‌ನಲ್ಲಿ ಕೊನೆಗೊಂಡ ಟ್ವೆಂಟಿ-20 ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿತ್ತು. ಆದರೆ, ಸರಣಿಯಲ್ಲಿ ರನ್‌ಗಾಗಿ ಪರದಾಟ ನಡೆಸಿದ್ದ ಮಂಧಾನ ನಾಲ್ಕು ಇನಿಂಗ್ಸ್ ಗಳಲ್ಲಿ 21, 13, 7 ಹಾಗೂ 5 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News