ಸರಣಿ ವಶಪಡಿಸಿಕೊಳ್ಳುವತ್ತ ಭಾರತದ ಚಿತ್ತ

Update: 2019-10-09 18:44 GMT

ಪುಣೆ, ಅ.9: ಭಾರತ ಹಾಗೂ ದಕ್ಷ್ಷಿಣ ಆಫ್ರಿಕಾ ಗುರುವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಮುಖಾಮುಖಿಯಾಗಲಿವೆ. ಭಾರತ ಸರಣಿ ಗೆಲ್ಲುವತ್ತ ಚಿತ್ತಹರಿಸಿದರೆ, ದಕ್ಷಿಣ ಆಫ್ರಿಕಾ ತಂಡ ಮೊದಲ ಪಂದ್ಯದಲ್ಲಿನ ಹೀನಾಯ ಸೋಲಿನ ಆಘಾತದಿಂದ ಬೇಗನೆ ಹೊರಬರುವತ್ತ ಗಮನ ಹರಿಸಲಿದೆ.

ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಬಳಗ 203 ರನ್‌ಗಳ ಅಂತರದಿಂದ ಜಯ ಸಾಧಿಸಿತ್ತು. ಮೊದಲ ಪಂದ್ಯದಲ್ಲಿನ ಗೆಲುವಿನ ಕಾವನ್ನು ಉಳಿಸಿಕೊಳ್ಳಲು ಬಯಸಿರುವ ಭಾರತ ಪುಣೆ ನಗರಿಯಲ್ಲಿ ಸರಣಿ ವಶಪಡಿಸಿಕೊಳ್ಳುವ ಯೋಜನೆ ಹಾಕಿಕೊಂಡಿದೆ.

 ಮೊದಲ ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದಿದ್ದ ರೋಹಿತ್ ಶರ್ಮಾ ಎರಡೂ ಇನಿಂಗ್ಸ್ ನಲ್ಲಿ ಶತಕ ಸಿಡಿಸಿ ಎಲ್ಲರ ಗಮನ ಸೆಳೆದರು. ರೋಹಿತ್‌ರನ್ನು ಟೆಸ್ಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಸುವ ಕೊಹ್ಲಿ ಹಾಗೂ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರ ಯೋಜನೆ ಅಮೋಘವಾಗಿ ಕಾರ್ಯರೂಪಕ್ಕೆ ಬಂದಿದೆ.

ಮಾಯಾಂಕ್ ಅಗರ್ವಾಲ್ ತನಗೆ ಲಭಿಸಿದ ಪ್ರತಿಯೊಂದು ಅವಕಾಶ ಬಳಸಿಕೊಳ್ಳುವ ಸೂಚನೆ ನೀಡಿದ್ದಾರೆ. ವಿಶಾಖಪಟ್ಟಣದಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯ ತನಕ ಭಾರತದ ಆರಂಭಿಕ ಆಟಗಾರನ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಮಾಯಾಂಕ್ ಭರವಸೆ ಮೂಡಿಸಿದ್ದಾರೆ.

 ಪುಣೆಯ ಗಹುಂಜೆ ಸ್ಟೇಡಿಯಂ ದಾಂಡಿಗರ ಸ್ನೇಹಿಯಾಗಿ ವರ್ತಿಸಿದರೆ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಹಾಗೂ ಹನುಮ ವಿಹಾರಿ ಭಾರತದ ಬ್ಯಾಟಿಂಗ್‌ಗೆ ಬಲ ನೀಡುವುದು ನಿಶ್ಚಿತ.

 2017ರಲ್ಲಿ ಪುಣೆ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧ ಸ್ವದೇಶಿ ಪಂದ್ಯದಲ್ಲಿ ಭಾರತದ ಟೆಸ್ಟ್ ತಂಡ ಕೊನೆಯ ಬಾರಿ ಬ್ಯಾಟಿಂಗ್ ವೈಫಲ್ಯ ಕಂಡಿತ್ತು. ಆಸೀಸ್ ಆಫ್-ಸ್ಪಿನ್ನರ್ ನಥಾನ್ ಲಿಯೊನ್ ಭಾರತದ ಬ್ಯಾಟ್ಸ್ ಮನ್‌ಗಳನ್ನು ಕಾಡಿದ್ದರು.

ನಾಯಕನಾಗಿ ಕೊಹ್ಲಿಗೆ 50ನೇ ಪಂದ್ಯ

ನಾಯಕ ವಿರಾಟ್ ಕೊಹ್ಲಿ ಗುರುವಾರ ಮತ್ತೊಂದು ಮಹತ್ವದ ಸಾಧನೆ ಮಾಡಲಿದ್ದಾರೆ. ಭಾರತ ಟೆಸ್ಟ್ ತಂಡದ ನಾಯಕನಾಗಿ 50ನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತದ ಪರ ಗರಿಷ್ಠ ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ನಾಯಕರ ಪಟ್ಟಿಯಲ್ಲಿ ಸೌರವ್ ಗಂಗುಲಿ(49)ಅವರೊಂದಿಗೆ ಕೊಹ್ಲಿ 2ನೇ ಸ್ಥಾನ ಹಂಚಿಕೊಂಡಿದ್ದಾರೆ. 50ನೇ ಪಂದ್ಯದಲ್ಲಿ ಆಡುವ ಮೂಲಕ ನಾಯಕನಾಗಿ ಗರಿಷ್ಠ ಪಂದ್ಯ ಆಡಿದ ಭಾರತದ 2ನೇ ನಾಯಕನಾಗಲಿದ್ದಾರೆ. ಎಂಎಸ್ ಧೋನಿ 2008ರಿಂದ 14ರ ತನಕ 60 ಪಂದ್ಯಗಳಲ್ಲಿ ಭಾರತದ ಟೆಸ್ಟ್ ನಾಯಕತ್ವವಹಿಸಿದ ದಾಖಲೆ ನಿರ್ಮಿಸಿದ್ದಾರೆ.

ಭಾರತ ತಂಡ ರೋಹಿತ್ ಶರ್ಮಾ ಹಾಗೂ ಆರ್.ಅಶ್ವಿನ್‌ರನ್ನು ಮೊದಲ ಟೆಸ್ಟ್ ನಲ್ಲಿ ದೀರ್ಘ ಸಮಯದ ಬಳಿಕ ಕಣಕ್ಕಿಳಿಸಿತ್ತು. ಇಬ್ಬರೂ ಚಿತ್ತಾಕರ್ಷಕ ಪ್ರದರ್ಶನ ನೀಡಿದ್ದಾರೆ. ಈಇಬ್ಬರು ಕೊಹ್ಲಿ ಹಾಗೂ ಟೀಮ್ ಮ್ಯಾನೇಜ್‌ಮೆಂಟ್‌ಗೆ ಅಂತಿಮ-11ರ ಬಳಗದಲ್ಲಿ ಬದಲಾವಣೆ ಮಾಡುವ ಒತ್ತಡವನ್ನು ಕಡಿಮೆ ಮಾಡಿದ್ದಾರೆ.

ಟೀಮ್ ನ್ಯೂಸ್

ದಕ್ಷಿಣ ಆಫ್ರಿಕಾ ತಂಡ ಲುಂಗಿ ಗಿಡಿಗೆ ಅವಕಾಶ ನೀಡಿ ವೇಗದ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು ಬಯಸಿದೆ. ಡೇನ್ ಪೀಟ್ ಜಾಗಕ್ಕೆ ಅನ್ರಿಚ್ ನೊರ್ಟ್ಜೆ ಅವರನ್ನು ಆಡಿಸುವ ಯೋಜನೆ ಹಾಕಿಕೊಂಡಿದೆ.ಪೀಟ್ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೆ, ಬೌಲಿಂಗ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಲಿಲ್ಲ.

ಪಂದ್ಯದ ಸಮಯ: ಬೆಳಗ್ಗೆ 9:30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News