ಬಿಜೆಪಿ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಕ್ಕೆ ವಿರೋಧ: ಶಿವಸೇನೆಯ 28 ಕಾರ್ಪೊರೇಟರ್ ಗಳು ರಾಜೀನಾಮೆ

Update: 2019-10-10 09:11 GMT

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕಲ್ಯಾಣ್ (ಪೂರ್ವ) ಕ್ಷೇತ್ರದಿಂದ ಸೀಟು ಹಂಚಿಕೆ ಒಪ್ಪಂದದಂತೆ ಬಿಜೆಪಿಯ ಎರಡು ಬಾರಿಯ ಶಾಸಕ ಗಣಪತ್ ಗಾಯಕ್ವಾಡ್ ಅವರು ಎನ್‍ಡಿಎ ಅಭ್ಯರ್ಥಿಯಾಗಿರುವುದನ್ನು ವಿರೋಧಿಸಿ ಶಿವಸೇನೆಯ 28 ಮಂದಿ ಕಾರ್ಪೊರೇಟರ್ ಗಳು ಹಾಗೂ 200ರಷ್ಟು ಪಕ್ಷದ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಗಾಯಕ್ವಾಡ್ ಈ ಕ್ಷೇತ್ರಕ್ಕೇನೂ ಮಹತ್ತರ ಕೊಡುಗೆ ನೀಡದೇ ಇದ್ದರೂ ಅವರನ್ನು ಮತ್ತೆ ಅಭ್ಯರ್ಥಿಯನ್ನಾಗಿಸಿರುವುದು ಸರಿಯಲ್ಲ ಎಂಬುದು ಶಿವಸೇನೆ ಕಾರ್ಯಕರ್ತರ ವಾದವಾಗಿದೆ. ಎಲ್ಲರೂ 'ಸೀಟು ಹಂಚಿಕೆಯ ಕುರಿತಂತೆ ಅಸಮಾಧಾನ'ದ ಕಾರಣ ನೀಡಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಈ ಕ್ಷೇತ್ರದಿಂದ ಶಿವಸೇನೆಯ ಧನಂಜಯ್ ಬೊಡರೆ ಅವರನ್ನು ಅಭ್ಯರ್ಥಿಯಾಗಿಸಬೇಕೆಂಬುದು ರಾಜೀನಾಮೆ ನೀಡಿದವರ ಆಗ್ರಹವಾಗಿದೆ. ಇಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ಧನಂಜಯ್ ಕಳೆದ 27 ವರ್ಷಗಳಿಂದ ಶಿವಸೇನೆಯಲ್ಲಿದ್ದಾರೆ.

ಗಾಯಕ್ವಾಡ್ ಅವರನ್ನು ಕಲ್ಯಾಣ್ (ಪೂರ್ವ)ಕ್ಷೇತ್ರದಿಂದ ಅಭ್ಯರ್ಥಿಯಾಗಿಸಿದ ಬೆನ್ನಿಗೇ ಧನಂಜಯ್ ಪಕ್ಷದ ವಿರುದ್ಧ ಬಂಡಾಯವೆದ್ದು ಅದೇ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.

ರಾಜ್ಯದ ಒಟ್ಟು 288 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 164ರಲ್ಲಿ ಹಾಗೂ ಶಿವಸೇನೆ 124 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News