ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಮೇರಿಕೋಮ್ ಸೆಮಿ ಫೈನಲ್‌ಗೆ

Update: 2019-10-11 04:39 GMT

 ಮಾಸ್ಕೊ, ಅ.10: ಆರು ಬಾರಿಯ ಚಾಂಪಿಯನ್ ಮೇರಿ ಕೋಮ್(51ಕೆಜಿ)ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್ ತಲುಪಿದ್ದಾರೆ. ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬಾಕ್ಸರ್ ಆಗಿರುವ ಮೇರಿ ಕೋಮ್ ಎಂಟನೇ ಪದಕವನ್ನು ಖಚಿತಪಡಿಸಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಗುರುವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಮೇರಿ ಕೋಮ್ ಕೊಲಂಬಿಯಾದ ವಲೆನ್ಸಿಯಾ ವಿಕ್ಟೋರಿಯಾ ಅವರನ್ನು 5-0 ಅಂತರದಿಂದ ಮಣಿಸಿದರು.ಈ ಮೂಲಕ ಅಂತಿಮ-4ರ ಸುತ್ತು ತಲುಪಿದರು.

ಶುಕ್ರವಾರ ವಿಶ್ರಾಂತಿ ಪಡೆಯಲಿರುವ ಮೇರಿ ಕೋಮ್ ಶನಿವಾರ ಸೆಮಿಫೈನಲ್ ಪಂದ್ಯ ಆಡಲಿದ್ದಾರೆ. ಸೆಮಿ ಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಟರ್ಕ್ ಬುಸೆನಾಝ್ ಕಾಕಿರೊಗ್ಲು ಸವಾಲನ್ನು ಎದುರಿಸಲಿದ್ದಾರೆ. ಹಾಲಿ ಯುರೋಪಿಯನ್ ಚಾಂಪಿಯನ್‌ಶಿಪ್ ಹಾಗೂ ಯುರೋಪಿಯನ್ ಗೇಮ್ಸ್ ಚಾಂಪಿಯನ್ ಕಾಕಿರೊಗ್ಲು ಮತ್ತೊಂದು ಕ್ವಾರ್ಟರ್ ಫೈನಲ್‌ನಲಿ ಚೀನಾದ ಕೈ ಝಾಂಗ್‌ಜಿವು ಅವರನ್ನು ಎದುರಿಸಲಿದ್ದಾರೆ.

 ‘‘ಪದಕ ಖಚಿತಪಡಿಸಿರುವುದಕ್ಕೆ ಖುಷಿಯಾಗುತ್ತಿದೆ. ಫೈನಲ್ ತಲುಪಲು ಮೊದಲ ಆದ್ಯತೆ ನೀಡುವೆ’’ ಎಂದು 36ರ ಹರೆಯದ ಮೇರಿಕೋಮ್ ಹೇಳಿದ್ದಾರೆ.

ಪದಕ ಖಚಿತಪಡಿಸಿದ ಮಂಜು ರಾಣಿ, ಜಮುನಾ ಬೋರೊ

ಇ  ದೇ ಮೊದಲ ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತಿರುವ ಮಂಜು ರಾಣಿ ಹಾಗೂ ಜಮುನಾ ಬೋರೊ ಸೆಮಿ ಫೈನಲ್‌ಗೆ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿದರು.

ಹರ್ಯಾಣದ ಬಾಕ್ಸರ್ ರಾಣಿ 48 ಕೆಜಿ ತೂಕ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಹಾಗೂ ಕಳೆದ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ದಕ್ಷಿಣ ಕೊರಿಯಾದ ಕಿಮ್ ಹಿಯಾಂಗ್ ಮಿ ಅವರನ್ನು 4-1 ಅಂತರದಿಂದ ಮಣಿಸಿದ್ದಾರೆ. ಕಠಿಣ ಸವಾಲು ಎದುರಾದ ಹೊರತಾಗಿಯೂ ಒತ್ತಡದ ಪರಿಸ್ಥಿತಿಯಲ್ಲೂ ಶಾಂತಚಿತ್ತದಿಂದ ಆಡಿದ ರಾಣಿ ಅಗ್ರ ಶ್ರೇಯಾಂಕದ ಕಿಮ್ ಹಿಯಾಂಗ್ ಮಿ ಎದುರು ಗೆಲುವಿನ ನಗೆ ಬೀರಿದರು. ರಾಣಿ ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್‌ನ ಚುಥಾಮತ್ ರಾಟ್ಸಾಟ್‌ರನ್ನು ಎದುರಿಸಲಿದ್ದಾರೆ.

ಅಸ್ಸಾಂ ಬಾಕ್ಸರ್ ಜಮುನಾ ಬೋರೊ(54ಕೆಜಿ)ಜರ್ಮನಿಯ ಉರ್ಸುಲಾ ಗೊಟ್ಟಲಾಬ್‌ರನ್ನು 4-1 ಅಂತರದಿಂದ ಮಣಿಸಿ ಅಂತಿಮ ನಾಲ್ಕರ ಸುತ್ತು ತಲುಪಿದರು. ಮುಂದಿನ ಸುತ್ತಿನಲ್ಲಿ ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಹ್ವಾಂಗ್ ಸಿಯಾವೊ ವೆನ್‌ರನ್ನು ಮುಖಾಮುಖಿಯಾಗಲಿದ್ದಾರೆ. ಎರಡು ಬಾರಿ ಕಂಚಿನ ಪದಕ ಜಯಿಸಿದ್ದ ಕವಿತಾ ಚಹಾಲ್(+81ಕೆಜಿ)ಬೆಲಾರಸ್‌ನ ಕಸಿಯಾರ್ನಾ ಕವಲೆವಾ ವಿರುದ್ಧ 0-5 ಅಂತರದಿಂದ ಸೋಲನುಭವಿಸಿ ಟೂರ್ನಿಯಿಂದ ಹೊರ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News