ತಾನು ಮಾಡಿದ ತಪ್ಪಿಗೆ ಸ್ವತಃ ದಂಡ ವಿಧಿಸಿಕೊಂಡ ಜಿಲ್ಲಾ ಕಲೆಕ್ಟರ್!

Update: 2019-10-10 09:59 GMT

ಔರಂಗಾಬಾದ್, ಅ.10: ಕಚೇರಿಯಲ್ಲಿ ಇನ್ನೂ ಪ್ಲಾಸ್ಟಿಕ್ ಕಪ್ ಗಳನ್ನು ಬಳಸಲಾಗುತ್ತಿರುವ ಕುರಿತಂತೆ ಪತ್ರಕರ್ತರೊಬ್ಬರು ತಿಳಿಸಿದ  ನಂತರ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕಲೆಕ್ಟರ್ ಅಸ್ತೀಕ್ ಕುಮಾರ್ ಪಾಂಡೆ ತಮಗೆ ತಾವೇ 5,000 ರೂ. ದಂಡ ವಿಧಿಸಿದ್ದಾರೆ.

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿ ವಾಪಸ್ ಪಡೆದವರ ಮಾಹಿತಿ ನೀಡುವ ಸಲುವಾಗಿ ಸೋಮವಾರ ಕಲೆಕ್ಟರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿತ್ತು. ಈ ಸಂದರ್ಭ ಹಾಜರಿದ್ದ ಪತ್ರಕರ್ತರಿಗೆ ಏಕ ಬಳಕೆ ಪ್ಲಾಸ್ಟಿಕ್ ಕಪ್ ಗಳಲ್ಲಿ ಚಹಾ ಒದಗಿಸಲಾಗಿತ್ತು. ಇದು ರಾಜ್ಯವ್ಯಾಪಿ ಜಾರಿಯಲ್ಲಿರುವ ಪ್ಲಾಸ್ಟಿಕ್ ನಿಷೇಧದ ಉಲ್ಲಂಘನೆಯಲ್ಲವೇ ಎಂದು ಒಬ್ಬ ಪತ್ರಕರ್ತ ಕೇಳಿದಾಗ ಜಿಲ್ಲಾ ಕಲೆಕ್ಟರ್ ತಮ್ಮ  ತಪ್ಪನ್ನು ಒಪ್ಪಿಕೊಂಡು  ತಮಗೆ ತಾವೇ ದಂಡ ವಿಧಿಸಿದರು.

ಪತ್ರಿಕಾಗೋಷ್ಠಿ ಮುಗಿದ ನಂತರ ಕಲೆಕ್ಟರ್ ತಮ್ಮ ಕಚೇರಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಎಂಟು ದಿನಗಳ ಅವಧಿಯಲ್ಲಿ ಕಲೆಕ್ಟರ್ ಕಚೇರಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಉಲ್ಲಂಘಿಸಿದ ಎರಡನೇ ಪ್ರಕರಣ ಇದಾಗಿದೆ. ಮೊದಲ ಪ್ರಕರಣದಲ್ಲಿ ಚುನಾವಣಾ ಅಭ್ಯರ್ಥಿಯೊಬ್ಬರು ತಮ್ಮ ನಾಮಪತ್ರ ಸಲ್ಲಿಸಲು ಆಗಮಿಸಿದ್ದ ವೇಲೆ ಠೇವಣಿ ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ತಂದಿದ್ದರು. ಇದನ್ನು ಅಧಿಕಾರಿಗಳು ಗಮನಿಸಿ ಅವರಿಗೆ ರೂ 5,000 ದಂಡ ವಿಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News