740 ಕೋಟಿ ರೂ. ವಂಚನೆ ಆರೋಪ: 'ರ‍್ಯಾನ್ ಬ್ಯಾಕ್ಸಿ'ಯ ಮಾಜಿ ಪ್ರವರ್ತಕ ಶಿವಿಂದರ್ ಸಿಂಗ್ ಬಂಧನ

Update: 2019-10-10 15:55 GMT

ಹೊಸದಿಲ್ಲಿ,ಅ.10: 740 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಔಷಧಿ ಉತ್ಪಾದಕ ದೈತ್ಯ ' ರ‍್ಯಾನ್ ಬ್ಯಾಕ್ಸಿ'ಯ ಮಾಜಿ ಮುಖ್ಯಸ್ಥ ಶಿವಿಂದರ್ ಸಿಂಗ್‌ರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಸದ್ಯ ಪೊಲೀಸರು ಸಿಂಗ್ ಸಹೋದರ ಮಲ್ವಿಂದರ್ ಸಿಂಗ್‌ಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದ ಆಗಸ್ಟ್‌ನಲ್ಲಿ ಜಾರಿ ನಿರ್ದೇಶನಾಲಯ ಈ ಇಬ್ಬರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿತ್ತು.

ಸಿಂಗ್ ಸಹೋದರರು 740 ಕೋಟಿ ರೂ.ಅವ್ಯವಹಾರ ಮತ್ತು ವಂಚನೆ ನಡೆಸಿದ್ದಾರೆ ಎಂದು ರೆಲಿಗೆರ್ ಫಿನ್ವೆಸ್ಟ್ ಆರೋಪಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಸಿಂಗ್ ಸಹೋದರರ ವಿರುದ್ಧ ರೆಲಿಗೆರ್ ಫಿನ್ವೆಸ್ಟ್ ಲಿ. ದಿಲ್ಲಿ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗದಲ್ಲಿ ಕ್ರಿಮಿನಲ್ ದೂರು ದಾಖಲಿಸಿತ್ತು. ಮೇನಲ್ಲಿ ಆರೋಪಿಗಳ ವಿರುದ್ಧ ವಂಚನೆ ಮತ್ತು ಅವ್ಯವಹಾರ ಪ್ರಕರಣ ದಾಖಲಿಸಲಾಗಿತ್ತು. ಜಾರಿ ನಿರ್ದೇಶನಾಲಯ ಆರೋಪಿಗಳ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ತನಿಖೆ ಆರಂಭಿಸಿತ್ತು.

' ರ‍್ಯಾನ್ ಬ್ಯಾಕ್ಸಿ' ಲ್ಯಾಬೊರೆಟರಿಸ್ ಲಿ. ಅನ್ನು ಸಿಂಗ್ ಸಹೋದರರು 2008ರಲ್ಲಿ ಜಪಾನ್ ಸಂಸ್ಥೆ ಡೈಚಿ ಸಂಕ್ಯೊ ಮಾರಿದ್ದರು ಮತ್ತು ತಮ್ಮ ಕುಟುಂಬ ಮಾಲಕತ್ವದ ಆಸ್ಪತ್ರೆ ಸರಣಿ ಫೋರ್ಟಿಸ್ ಹೆಲ್ತ್‌ಕೇರ್ ಮತ್ತು ಹಣಕಾಸು ಸೇವೆ ಸಂಸ್ಥೆ ರೆಲಿಗೆರ್ ಎಂಟರ್‌ಪ್ರೈಸಸ್ ಮೇಲೆ ಗಮನಹರಿಸಿದ್ದರು. ಆದರೆ ಆರ್ಥಿಕ ಸಂಕಷ್ಟ ಅವರಿಬ್ಬರೂ ಎರಡೂ ಕಂಪೆನಿಗಳ ಮಾಲಕತ್ವವನ್ನು ಕಳೆದುಕೊಳ್ಳುವಂತೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News