ರೈಲ್ವೇ ನಿಲ್ದಾಣಗಳ ನಿಧಾನಗತಿಯ ಪುನರ್‌ಅಭಿವೃದ್ಧಿ: ನೀತಿ ಆಯೋಗ ಟೀಕೆ

Update: 2019-10-10 14:26 GMT

ಹೊಸದಿಲ್ಲಿ,ಅ.10: ಭಾರತೀಯ ರೈಲ್ವೇ ನಿಲ್ದಾಣಗಳ ಪುನರ್‌ಅಭಿವೃದ್ಧಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನೀತಿ ಆಯೋಗ, ಒಂದು ಲಕ್ಷ ಕೋಟಿ ರೂ.ನ ಈ ಯೋಜನೆಗೆ ವೇಗ ತುಂಬಲು ಕಾರ್ಯದರ್ಶಿಗಳ ಸದೃಢ ತಂಡವನ್ನು ರಚಿಸುವಂತೆ ಆಗ್ರಹಿಸಿದೆ.

ಈ ಕುರಿತು ಅಕ್ಟೋಬರ್‌ನಲ್ಲಿ ರೈಲ್ವೇ ಮಂಡಳಿ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್, ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ರೈಲ್ವೇ ನಿಲ್ದಾಣ ಪುನರ್‌ಅಭಿವೃದ್ಧಿ ಕಾಮಗಾರಿಯಲ್ಲಿ ಉಂಟಾಗಿರುವ ವಿಳಂಬವನ್ನು ಟೀಕಿಸಿದ್ದಾರೆ. ಈ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ವಿವಿಧ ಕಾರ್ಯದರ್ಶಿಗಳು ಮತ್ತು ಸಂಬಂಧಿತ ರೈಲ್ವೇ ಅಧಿಕಾರಿಗಳ ತಂಡವನ್ನು ರಚಿಸುವುದು ಸೂಕ್ತ ಎಂದು ಅವರು ಸಲಹೆ ನೀಡಿದ್ದಾರೆ. 400 ರೈಲ್ವೇ ನಿಲ್ದಾಣಗಳನ್ನು ಪುನರ್‌ಅಭಿವೃದ್ಧಿಗೊಳಿಸುವ ಪ್ರಧಾನಿ ಮೋದಿಯ ಒಂದು ಲಕ್ಷ ಕೋಟಿ ರೂ.ನ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ನಿಲ್ದಾಣಗಳಲ್ಲಿ ಶಾಪಿಂಗ್ ಪ್ಲಾಝಾಗಳು, ಕಚೇರಿ ಸಂಕೀರ್ಣಗಳು, ಹೋಟೆಲ್‌ಗಳು, ಮಲ್ಟಿಪ್ಲೆಕ್ಸ್‌ಗಳು ಮತ್ತು ವಾಹನ ನಿಲುಗಡೆ ಸ್ಥಳ ಸೇರಿದಂತೆ ಇತರ ವಾಣಿಜ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ.

ರೈಲ್ವೇ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಸೌಲಭ್ಯಗಳನ್ನೂ ಉತ್ತಮಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದನ್ನು ಗಮನದಲ್ಲಿಟ್ಟು ಈ ಯೋಜನೆಯನ್ನು ಮೊದಲು 50 ರೈಲ್ವೇ ನಿಲ್ದಾಣಗಳಲ್ಲಿ ಆದ್ಯತಾ ಮಟ್ಟದಲ್ಲಿ ಕಾರ್ಯಗತಗೊಳಿಸಬೇಕು ಎಂದು ನೀತಿ ಆಯೋಗ ಮತ್ತು ರೈಲ್ವೆ ಸಚಿವಾಲಯದ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅಮಿತಾಬ್ ಕಾಂತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News