ಕೇಂದ್ರದ ಅನುಮತಿ ನಿರಾಕರಣೆ:ವೀಡಿಯೊ ಕಾನ್ಫರೆನ್ಸ್ ಮೂಲಕ ಡೆನ್ಮಾರ್ಕ್ ಹವಾಮಾನ ಸಮ್ಮೇಳನಲ್ಲಿ ಮಾತನಾಡಲಿರುವ ಕೇಜ್ರಿವಾಲ್

Update: 2019-10-10 16:40 GMT

ಹೊಸದಿಲ್ಲಿ,ಅ.10: ಕೇಂದ್ರ ಸರಕಾರ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಡೆನ್ಮಾರ್ಕ್‌ಗೆ ತೆರಳಲು ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಅಲ್ಲಿ ಶುಕ್ರವಾರ ನಡೆಯಲಿರುವ ಮೇಯರ್‌ಗಳ ಹವಾಮಾನ ಸಮ್ಮೇಳನದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರೀದ್ ಡೀಪ್ಲಿ, ಸಿಟಿ ಸೊಲ್ಯೂಶನ್ಸ್ ಫೋರ್ ಕ್ಲೀನ್ ಏರ್ ಎಂಬ ಹೆಸರಿನ ಈ ಶೃಂಗದ ಪಾಲ್ಗೊಂಡ ನಂತರ ಕೇಜ್ರಿವಾಲ್ ಜಗತ್ತಿನ ಆರು ಪ್ರಮುಖ ನಗರಗಳ ಮೇಯರ್‌ಗಳ ಜೊತೆ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಲಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ದಿಲ್ಲಿಯಲ್ಲಿ ಯಾವ ರೀತಿ ಶೇ.25 ವಾಯುಮಾಲಿನ್ಯ ಕಡಿಮೆ ಮಾಡಲಾಗಿದೆ ಎನ್ನುವುದನ್ನು ಕೇಜ್ರಿವಾಲ್ ಈ ಸಂದರ್ಭದಲ್ಲಿ ವಿವರಿಸಲಿದ್ದಾರೆ. ವಾಯು ಮಾಲಿನ್ಯ ಕಡಿಮೆಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ, ವಾಹನ ಸಂಚಾರವನ್ನು ನಿರ್ಬಂಧಿಸಿದ ಸಮ-ಬೆಸ ಪದ್ದತಿಯನ್ನು ಯಶಸ್ವಿಯಾಗಿ ಜಾರಿಗೆ ತಂದ ಜಗತ್ತಿನಲ್ಲೇ ಮೊದಲ ನಗರವಾಗಿರುವ ದಿಲ್ಲಿಯ ಅನುಭವದ ಬಗ್ಗೆಯೂ ಅವರು ಮಾತನಾಡಲಿದ್ದಾರೆ. ಇದೊಂದು ಮೇಯರ್ ಮಟ್ಟದ ಕಾರ್ಯಕ್ರಮವಾಗಿರುವುದರಿಂದ ಕೇಜ್ರಿವಾಲ್ ಅವರಿಗೆ ಡೆನ್ಮಾರ್ಕ್‌ಗೆ ತೆರಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅನುಮತಿ ನಿರಾಕರಿಸಿದೆ ಎಂದು ಅಕ್ಟೋಬರ್ 9ರಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News