ಸಿರಿಯ ಸೇನಾ ಕಾರ್ಯಾಚರಣೆ ಪ್ರಮಾಣಬದ್ಧ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಟರ್ಕಿ ಹೇಳಿಕೆ

Update: 2019-10-10 17:23 GMT

ವಿಶ್ವಸಂಸ್ಥೆ, ಅ. 10: ಉತ್ತರ ಸಿರಿಯದಲ್ಲಿ ಕುರ್ದ್ ಬಂಡುಕೋರರ ವಿರುದ್ಧ ತಾನು ನಡೆಸಿರುವ ಸೇನಾ ಕಾರ್ಯಾಚರಣೆಯು ‘‘ಪ್ರಮಾಣಬದ್ದವಾಗಿ ಇರುತ್ತದೆ, ಲೆಕ್ಕಾಚಾರದಿಂದ ಕೂಡಿರುತ್ತದೆ ಹಾಗೂ ಜವಾಬ್ದಾರಿಯುತವಾಗಿರುತ್ತದೆ’’ ಎಂದು ಟರ್ಕಿ ಬುಧವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದೆ.

ಟರ್ಕಿಯ ಸೇನಾ ಕಾರ್ಯಾಚರಣೆ ಬಗ್ಗೆ ಚರ್ಚಿಸಲು 15 ಸದಸ್ಯರ ಭದ್ರತಾ ಮಂಡಳಿಯು ಸಭೆ ಸೇರುವುದಕ್ಕೆ ಮುಂಚಿತವಾಗಿ ಅದು ಜಾಗತಿಕ ವೇದಿಕೆಗೆ ಈ ವಿವರಣೆಯನ್ನು ನೀಡಿದೆ.

ಸಿರಿಯದೊಂದಿಗೆ ಟರ್ಕಿ ಹೊಂದಿರುವ ದಕ್ಷಿಣದ ಗಡಿಯಲ್ಲಿರುವ ‘‘ಭಯೋತ್ಪಾದಕ ಕಾರಿಡಾರನ್ನು’’ ನಿರ್ಮೂಲಗೊಳಿಸಲು ಸೇನಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಟರ್ಕಿ ಈಗಾಗಲೇ ಹೇಳಿದೆ.

ಅಮೆರಿಕ ಬೆಂಬಲಿತ ಸಿರಿಯನ್ ಡೆಮಾಕ್ರಟಿಕ್ ಪಡೆಗಳ ಪ್ರಧಾನ ಘಟಕವಾಗಿರುವ ಕುರ್ದಿಶ್ ವೈಪಿಜಿ ಭಯೋತ್ಪಾದಕ ಗುಂಪಾಗಿದೆ ಎಂದು ಸಿರಿಯ ಹೇಳುತ್ತದೆ. ಅದು ಟರ್ಕಿಯಲ್ಲಿ ಹಲವು ವರ್ಷಗಳ ಕಾಲ ಹೋರಾಟ ನಡೆಸಿದ ಕುರ್ದಿಶ್ ಬಂಡುಕೋರರೊಂದಿಗೆ ನಂಟು ಹೊಂದಿದೆ ಎಂದು ಅದು ಹೇಳಿದೆ.

ಸಿರಿಯದಲ್ಲಿರುವ ತಮ್ಮ ನೆಲೆಗಳ ಮೇಲೆ ಟರ್ಕಿ ಯುದ್ಧ ವಿಮಾನಗಳು ದಾಳಿ ನಡೆಸುತ್ತಿರುವಂತೆಯೇ, ಕುರ್ದಿಶ್ ಹೋರಾಟಗಾರರು ಸಿರಿಯ ಮತ್ತು ರಶ್ಯದತ್ತ ಮುಖ ಮಾಡಿದ್ದಾರೆ.

‘‘ಹಿಂದಿನ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಂತೆ, ಈ ಬಾರಿಯೂ ಟರ್ಕಿಯ ಪ್ರತಿಕ್ರಿಯೆಯು ಪ್ರಮಾಣಬದ್ಧವಾಗಿರುತ್ತದೆ, ಲೆಕ್ಕಾಚಾರದಿಂದ ಕೂಡಿರುತ್ತದೆ ಹಾಗೂ ಜವಾಬ್ದಾರಿಯುತವಾಗಿರುತ್ತದೆ’’ ಎಂದು ವಿಶ್ವಸಂಸ್ಥೆಗೆ ಟರ್ಕಿಯ ರಾಯಭಾರಿ ಫೆರಿದುನ್ ಸಿನಿರ್ಲಿಯೊಗ್ಲು ಭದ್ರತಾ ಮಂಡಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ದಾಳಿಯ ವರದಿಗಾಗಿ ಪತ್ರಕರ್ತನ ಬಂಧನ

ಟರ್ಕಿಯ ಪ್ರತಿಪಕ್ಷಕ್ಕೆ ಸೇರಿದ ಸುದ್ದಿ ವೆಬ್‌ಸೈಟ್ ಒಂದರ ಮುಖ್ಯಸ್ಥನನ್ನು ಗುರುವಾರ ಬಂಧಿಸಲಾಗಿದೆ ಎಂದು ವೆಬ್‌ಸೈಟ್‌ನ ಮಾಲೀಕರು ಹೇಳಿದ್ದಾರೆ.

ಟರ್ಕಿ ಬುಧವಾರ ಸಿರಿಯದಲ್ಲಿ ನಡೆಸಿದ ಸೇನಾ ಕಾರ್ಯಾಚರಣೆಯ ಟೀಕಾಕಾರರನ್ನು ದಮನಿಸುವ ಪ್ರಯತ್ನಗಳ ಭಾಗವಾಗಿ ಈ ಬಂಧನ ನಡೆದಿದೆ.

ಟ್ವಿಟರ್ ಸಂದೇಶವೊಂದರ ವಿಷಯದಲ್ಲಿ ‘‘ಜನರಲ್ಲಿ ದ್ವೇಷ ಮತ್ತು ವೈರತ್ವವನ್ನು ಪ್ರೇರೇಪಿಸಿರುವುದಕ್ಕಾಗಿ’’ ಎಡಪಂಥೀಯ ವಿಚಾರಧಾರೆಯ ‘ಬಿರ್ಗನ್’ ವೆಬ್‌ಸೈಟ್‌ನ ಮುಖ್ಯಸ್ಥ ಹಕನ್ ಡೆಮಿರ್‌ರನ್ನು ಬಂಧಿಸಲಾಗಿದೆ ಎಂದು ಟರ್ಕಿಯ ಸರಕಾರಿ ಒಡೆತನದ ಸುದ್ದಿ ಸಂಸ್ಥೆ ಅನಡೊಲು ವರದಿ ಮಾಡಿದೆ.

ಸಿರಿಯದಲ್ಲಿರುವ ಕುರ್ದ್ ಬಂಡುಕೋರರ ನೆಲೆಗಳ ಮೇಲೆ ಬುಧವಾರ ಟರ್ಕಿಯ ಯುದ್ಧ ವಿಮಾನಗಳು ನಡೆಸಿದ ವಾಯು ದಾಳಿಯಲ್ಲಿ ನಾಗರಿಕರು ಮೃತಪಟ್ಟಿದ್ದಾರೆ ಎಂಬುದಾಗಿ ‘ಬಿರ್ಗನ್’ ವರದಿ ಮಾಡಿದ ಬಳಿಕ ಅದು ಭಾರೀ ಟೀಕೆಗೆ ಒಳಗಾಗಿದೆ. ಈ ವರದಿಯನ್ನು ಸರಕಾರ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News