ಪಾಕ್ ವಿರುದ್ಧ ಟ್ವೆಂಟಿ-20 ಸರಣಿ ಜಯಿಸಿದ ಶ್ರೀಲಂಕಾ

Update: 2019-10-11 04:43 GMT

ಲಾಹೋರ್, ಅ.10: ಹೊಸ ಆಟಗಾರರನ್ನು ಒಳಗೊಂಡ ಶ್ರೀಲಂಕಾ ಕ್ರಿಕೆಟ್ ತಂಡ ಅಗ್ರ ರ್ಯಾಂಕಿನ ಪಾಕಿಸ್ತಾನ ತಂಡವನ್ನು ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 13 ರನ್‌ಗಳ ಅಂತರದಿಂದ ರೋಚಕವಾಗಿ ಮಣಿಸಿತು. ಈ ಗೆಲುವಿನ ಮೂಲಕ 3 ಪಂದ್ಯಗಳ ಸರಣಿಯಲ್ಲಿ 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.

ಇಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ ಮೊದಲೆರಡು ಪಂದ್ಯಗಳಲ್ಲಿ ಆಡಿದ್ದ ಐವರು ಆಟಗಾರರಿಗೆ ವಿಶ್ರಾಂತಿ ನೀಡಿದ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 147 ರನ್ ಗಳಿಸಲು ಶಕ್ತವಾಯಿತು. ಗೆಲ್ಲಲು 148 ರನ್ ಗುರಿ ಪಡೆದಿದ್ದ ಪಾಕಿಸ್ತಾನವನ್ನು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 134 ರನ್‌ಗೆ ನಿಯಂತ್ರಿಸಿದ ಶ್ರೀಲಂಕಾ ಗೆಲುವಿನ ನಗೆ ಬೀರಿತು. ಪಾಕ್ ಗೆಲುವಿಗೆ ಕೊನೆಯ 5 ಓವರ್‌ಗಳಲ್ಲಿ 54 ರನ್ ಅಗತ್ಯವಿತ್ತು. 8 ವಿಕೆಟ್ ಕೈಯ್ಯಲ್ಲಿತ್ತು. ಲೆಗ್-ಸ್ಪಿನ್ನರ್ ವನಿಂದು ಹಸರಂಗ 2 ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಉಡಾಯಿಸಿ ಲಂಕೆಗೆ ರೋಚಕ ಗೆಲುವು ತಂದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಚೊಚ್ಚಲ ಪಂದ್ಯ ಆಡಿದ ಒಶಾಂಡ ಫೆರ್ನಾಂಡೊ ಅರ್ಧಶತಕ(ಔಟಾಗದೆ 78, 48 ಎಸೆತ, 8 ಬೌಂಡರಿ, 3 ಸಿಕ್ಸರ್)ಕೊಡುಗೆ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಶ್ರೀಲಂಕಾ 58 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ನಾಯಕ ದಸುನ ಶನಕಾ ಜೊತೆ 5ನೇ ವಿಕೆಟ್‌ಗೆ 76 ರನ್ ಜೊತೆಯಾಟ ನಡೆಸಿದ್ದ ಫೆರ್ನಾಂಡೊ ತಂಡಕ್ಕೆ ಆಸರೆಯಾದರು. ಪಾಕ್ ವೇಗದ ಬೌಲರ್ ಮುಹಮ್ಮದ್ ಆಮಿರ್(3-27)ಯಶಸ್ವಿ ಬೌಲರ್ ಎನಿಸಿಕೊಂಡರು.

 ಪ್ರಮುಖ ವೇಗದ ಬೌಲರ್‌ಗಳಾದ ಇಸುರು ಉದಾನ ಹಾಗೂ ನುವಾನ್ ಪ್ರದೀಪ್ ಅನುಪಸ್ಥಿತಿಯ ನಡುವೆಯೂ ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಶ್ರೀಲಂಕಾದ ಪರ ವನಿಂದು ಹಸರಂಗ(3-21) ಹಾಗೂ ಚಂದ್ರಹಾಸ ಕುಮಾರ್(2-24) ಐದು ವಿಕೆಟ್‌ಗಳನ್ನು ಹಂಚಿಕೊಂಡರು.

ಆತಿಥೇಯ ಪಾಕ್ ಪರ ಹಾರಿಸ್ ಸೊಹೈಲ್(52,50ಎಸೆತ, 4 ಬೌಂಡರಿ, 1 ಸಿಕ್ಸರ್)ಅರ್ಧಶತಕ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಬಾಬರ್ ಆಝಂ(27), ಸರ್ಫರಾಝ್ ಅಹ್ಮದ್(17) ಹಾಗೂ ಇಫ್ತಿಖಾರ್ ಅಹ್ಮದ್(17)ಎರಡಂಕೆಯ ಸ್ಕೋರ್ ಗಳಿಸಿದರು. ಸೊಹೈಲ್ ಹಾಗೂ ಬಾಬರ್ 2ನೇ ವಿಕೆಟ್ ಜೊತೆಯಾಟದಲ್ಲಿ 76 ರನ್ ಸೇರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News