ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 40 ಶತಕ ಸಿಡಿಸಿದ ಭಾರತದ ಮೊದಲ ನಾಯಕ ಕೊಹ್ಲಿ

Update: 2019-10-11 08:08 GMT

ಹೊಸದಿಲ್ಲಿ, ಅ.11: ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 26ನೇ ಟೆಸ್ಟ್ ಶತಕ ದಾಖಲಿಸಿದ ವಿರಾಟ್ ಕೊಹ್ಲಿ ತನ್ನ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. 2014ರಲ್ಲಿ ಎಂಎಸ್ ಧೋನಿ ಅವರಿಂದ ನಾಯಕತ್ವದ ಹೊಣೆವಹಿಸಿಕೊಂಡಿದ್ದ ಕೊಹ್ಲಿ ನಾಯಕನಾಗಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 40 ಶತಕಗಳನ್ನು ಸಿಡಿಸಿದ ಭಾರತದ ಮೊದಲ ನಾಯಕನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಕೊಹ್ಲಿ ಇದೀಗ ನಾಯಕನಾಗಿ ಟೆಸ್ಟ್‌ನಲ್ಲಿ 19ನೇ ಶತಕ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 21 ಶತಕಗಳನ್ನು ಸಿಡಿಸಿದ್ದಾರೆ. ಆಸ್ಟ್ರೇಲಿಯದ ಲೆಜೆಂಡ್ ರಿಕಿ ಪಾಂಟಿಂಗ್ ನಾಯಕನಾಗಿ ಗರಿಷ್ಠ ಶತಕಗಳನ್ನು(41)ಸಿಡಿಸಿದ ಸಾಧನೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದ ವೇಗಿ ಫಿಲ್ಯಾಂಡರ್ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ್ದ ಕೊಹ್ಲಿ ತನ್ನ 81ನೇ ಪಂದ್ಯದಲ್ಲಿ(138ನೇ ಇನಿಂಗ್ಸ್)26ನೇ ಟೆಸ್ಟ್ ಶತಕ ಪೂರೈಸಿ ತನ್ನದೇ ಶೈಲಿಯಲ್ಲಿ ಪಾಕಿಸ್ತಾನದ ಲೆಜೆಂಡ್ ಇಂಝಮಾಮ್‌ವುಲ್ ಹಕ್ ದಾಖಲೆ ಮುರಿದರು. ಹಕ್ 120 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 25 ಶತಕಗಳನ್ನು ದಾಖಲಿಸಿದ್ದರು.

26ನೇ ಶತಕ ಪೂರೈಸಿದ ಕೊಹ್ಲಿ ಅವರು ಗರಿಷ್ಠ ಶತಕ ಗಳಿಸಿದ ಪಟ್ಟಿಯಲ್ಲಿರುವ ವೆಸ್ಟ್ ಇಂಡೀಸ್ ಲೆಜೆಂಡ್ ಗ್ಯಾರಿ ಸೋಬರ್ಸ್ ಹಾಗೂ ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ ಅವರೊಂದಿಗೆ ಸ್ಥಾನ ಹಂಚಿಕೊಂಡರು. ಒಟ್ಟು 51 ಶತಕ ಸಿಡಿಸಿರುವ ಸಚಿನ್ ತೆಂಡುಲ್ಕರ್ ಗರಿಷ್ಠ ಟೆಸ್ಟ್ ಶತಕ ಸಿಡಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News