ಡಾನ್ ಬ್ರಾಡ್ಮನ್ ದಾಖಲೆ ಮುರಿದ ಕೊಹ್ಲಿ

Update: 2019-10-12 03:02 GMT

ಪುಣೆ, ಅ.11: ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಅತ್ಯಂತ ಹೆಚ್ಚು ಬಾರಿ 150ಕ್ಕೂ ಅಧಿಕ ರನ್ ಗಳಿಸಿದ ಭಾರತ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯದ ದಂತಕತೆ ಡಾನ್ ಬ್ರಾಡ್ಮನ್ ಅವರ ದಾಖಲೆಯೊಂದನ್ನು ಮುರಿದರು. ಭಾರತ-ದಕ್ಷಿಣ ಆಫ್ರಿಕಾ ನಡುವೆ ಶುಕ್ರವಾರ ನಡೆದ ಎರಡನೇ ಟೆಸ್ಟ್ ನ 2ನೇ ದಿನದಾಟದಲ್ಲಿ ಕೊಹ್ಲಿ ಈ ಸಾಧನೆ ಮಾಡಿದರು. ಕೊಹ್ಲಿ ಇದೀಗ ಭಾರತದ ನಾಯಕನಾಗಿ 9ನೇ ಬಾರಿ 150ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಬ್ರಾಡ್ಮನ್ 8 ಬಾರಿ 150ಕ್ಕೂ ಅಧಿಕ ರನ್ ಗಳಿಸಿದ್ದಾರೆ. ತಲಾ 7 ಬಾರಿ 150 ಪ್ಲಸ್ ಸ್ಕೋರ್ ಗಳಿಸಿದ ಆಸ್ಟ್ರೇಲಿಯದ ಮೈಕಲ್ ಕ್ಲಾರ್ಕ್, ಶ್ರೀಲಂಕಾದ ಮಹೇಲ ಜಯವರ್ಧನೆ, ವೆಸ್ಟ್‌ಇಂಡೀಸ್‌ನ ಬ್ರಿಯಾನ್ ಲಾರಾ ಹಾಗೂ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಪಟ್ಟಿಯಲ್ಲಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. 50ನೇ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ನಾಯಕನಾಗಿ ಮುನ್ನಡೆಸಿದ 30ರ ಹರೆಯದ ಕೊಹ್ಲಿ ಈ ಮಹತ್ವದ ಪಂದ್ಯದಲ್ಲಿ ಶತಕ ಸಿಡಿಸಿದ ನಾಲ್ಕನೇ ನಾಯಕ ಎನಿಸಿಕೊಂಡರು. ನ್ಯೂಝಿಲ್ಯಾಂಡ್‌ನ ಸ್ಟೀಫನ್ ಫ್ಲೆಮಿಂಗ್, ಇಂಗ್ಲೆಂಡ್‌ನ ಅಲಸ್ಟೈರ್ ಕುಕ್ ಹಾಗೂ ಆಸ್ಟ್ರೇಲಿಯದ ಸ್ಟೀವ್ ವಾ ನಾಯಕನಾಗಿ ಆಡಿದ್ದ 50ನೇ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಭಾರತದ ನಾಯಕನಾಗಿ ಗರಿಷ್ಠ ರನ್ ಕಲೆ ಹಾಕಿರುವ ಕೊಹ್ಲಿ ಅವರು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ದಾಖಲೆಯನ್ನು ಹಿಂದಿಕ್ಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News