ದ್ವಿತೀಯ ಏಕದಿನ: ಭಾರತ ಜಯಭೇರಿ

Update: 2019-10-12 03:05 GMT

ವಡೋದರ, ಅ.11: ನಾಯಕಿ ಮಿಥಾಲಿ ರಾಜ್ ಹಾಗೂ ಪೂನಂ ರಾವತ್ ನೀಡಿದ ಅರ್ಧಶತಕಗಳ ಕೊಡುಗೆಯ ನೆರವಿನಿಂದ ಭಾರತದ ಮಹಿಳಾ ಕ್ರಿಕೆಟ್ ತಂಡ ಶುಕ್ರವಾರ ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯವನ್ನು 5 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 6 ವಿಕೆಟ್ ನಷ್ಟಕ್ಕೆ 247 ರನ್‌ಗೆ ನಿಯಂತ್ರಿಸಿತು. ಆ ಬಳಿಕ ಎರಡು ಓವರ್‌ಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆಯಿತು.

 ತಲಾ ಎರಡು ವಿಕೆಟ್ ಪಡೆದ ವೇಗದ ಬೌಲರ್ ಶಿಖಾ ಪಾಂಡೆ(2-38), ಎಡಗೈ ಸ್ಪಿನ್ನರ್ ಎಕ್ತಾ ಬಿಶ್ತ್(2-45) ಹಾಗೂ ಲೆಗ್-ಸ್ಪಿನ್ನರ್ ಪೂನಂ ಯಾದವ್(2-42)ಪ್ರವಾಸಿ ತಂಡವನ್ನು 250ರೊಳಗೆ ನಿಯಂತ್ರಿಸಿದರು.

ಗೆಲ್ಲಲು 248 ರನ್ ಬೆನ್ನಟ್ಟಿದ ಭಾರತ 12.5 ಓವರ್‌ಗಳಲ್ಲಿ ಆರಂಭಿಕ ಆಟಗಾರ್ತಿಯರಾದ ಪ್ರಿಯಾ ಪೂನಿಯಾ(20)ಹಾಗೂ ಜೆಮಿಮ್ಹಾ ರೋಡ್ರಿಗಸ್(18)ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಆತಿಥೇಯರ ಸ್ಕೋರ್ 66ಕ್ಕೆ2.

ಮೂರನೇ ವಿಕೆಟ್ ಜೊತೆಯಾಟದಲ್ಲಿ 129 ರನ್ ಸೇರಿಸಿದ ಪೂನಂ(65, 92 ಎಸೆತ) ಹಾಗೂ ಮಿಥಾಲಿ(66, 82 ಎಸೆತ)ತಂಡದ ರನ್ ಚೇಸಿಂಗ್‌ಗೆ ಬಲ ನೀಡಿದರು.ಮರಿಝಾನ್ ಕಾಪ್(1-29)ಇನಿಂಗ್ಸ್‌ನ 40ನೇ ಓವರ್‌ನಲ್ಲಿ ಮಿಥಾಲಿ ವಿಕೆಟ್ ಪಡೆದು ಈ ಜೋಡಿಯನ್ನು ಬೇರ್ಪಡಿಸಿದರು. ಮುಂದಿನ ಓವರ್‌ನಲ್ಲಿ ಪೂನಂ ವಿಕೆಟ್ ಒಪ್ಪಿಸಿದಾಗ ಭಾರತ 196 ರನ್‌ಗೆ 4ನೇ ವಿಕೆಟ್ ಕಳೆದುಕೊಂಡಿತು.

ಔಟಾಗದೆ 39ರನ್ (27 ಎಸೆತ, 5 ಬೌಂಡರಿ,1 ಸಿಕ್ಸರ್)ಗಳಿಸಿದ ಹರ್ಮನ್‌ಪ್ರೀತ್ ಕೌರ್ ಭಾರತಕ್ಕೆ ಇನ್ನೂ 12 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ದ.ಆಫ್ರಿಕಾಕ್ಕೆ ಲಿಝಿಲಿ ಲೀ(40) ಹಾಗೂ ಲೌರಾ ವೊಲ್ವಾರ್ಟ್(69)ಮೊದಲ ವಿಕೆಟ್‌ಗೆ 76 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದ್ದರು. ಲೀ ಔಟಾದ ಬಳಿಕ ಲೌರಾಗೆ ತ್ರಿಷಾ ಚೆಟ್ಟಿ(22) ಸಾಥ್ ನೀಡಿದರು. ಚೆಟ್ಟಿ ಹಾಗೂ ಲೌರಾ ವಿಕೆಟ್ ಪಡೆದ ಶಿಖಾ ಭಾರತಕ್ಕೆ ಮೇಲುಗೈ ಒದಗಿಸಿದರು.

 ಡು ಪ್ರೀಝ್(44) ಹಾಗೂ ಲಾರಾ ಗುಡಾಲ್(38)ಪ್ರವಾಸಿಗರ ಮೊತ್ತವನ್ನು 200ರ ಗಡಿ ದಾಟಿಸಿದರು. ಭಾರತ-ದ.ಆಫ್ರಿಕಾ ಅ.14ರಂದು ಮೂರನೇ ಹಾಗೂ ಕೊನೆಯ ಪಂದ್ಯ ಆಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News