'ಆರ್ಥಿಕ ಸ್ಥಿತಿ ದಿವಾಳಿ' ಹೇಳಿಕೆ ಬಾಲಿಶತನದ್ದು: ವಿಪಕ್ಷ ನಾಯಕ ಸಿದ್ದರಾಮಯ್ಯ

Update: 2019-10-12 13:22 GMT

ಬೆಂಗಳೂರು, ಅ. 12: ದೇಶದಲ್ಲೆ ಕರ್ನಾಟಕದ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, 2004ರಿಂದಲೂ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಬರಲಾಗಿದೆ. ಆದರೆ, ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ ಎಂಬ ಕೆಲವರ ಹೇಳಿಕೆ ಬಾಲಿಶತನದ್ದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಶನಿವಾರ ವಿಧಾನಸಭೆಯಲ್ಲಿ ಅನುದಾನ ಬೇಡಿಕೆಗಳ ಮೇಲೆ ಮಾತನಾಡಿದ ಅವರು, ರಾಜ್ಯದ ಹಣಕಾಸಿನ ಸ್ಥಿತಿ ಸುಸ್ಥಿತಿಯಲ್ಲೆ ಇದೆ. ಆದರೆ, ಮೋಟಾರು ವಾಹನ ತೆರಿಗೆ ಮಾತ್ರ ಖೋತಾ ಆಗಿದೆ. ಉಳಿದೆಲ್ಲ ತೆರಿಗೆ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಆಗಲಿದೆ ಎಂದರು.

‘ಖಜಾನೆ ಖಾಲಿಯಾಗಿದೆ’ ಎಂಬ ಮುಖ್ಯಮಂತ್ರಿ, ಖಜಾನೆ ಲೂಟಿಯಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಹೇಳಿಕೆ ಸಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಮಧ್ಯಪ್ರವೇಶಿಸಿದ ಬಿಎಸ್‌ವೈ, ‘ಶಾಸಕರೊಬ್ಬರು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳಿದ ವೇಳೆ ನಾನು ದುಡ್ಡಿಲ್ಲ ಎಂದಷ್ಟೇ ಹೇಳಿದ್ದೆ. ನಾನು ಖಜಾನೆ ಖಾಲಿ ಎಂದು ಎಲ್ಲಿಯೂ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದರು.

ಜಿಡಿಪಿ ಕುಸಿತ ಸಾಧ್ಯತೆ: ಆರ್ಥಿಕ ಹಿಂಜರಿತದ ಪರಿಣಾಮ ತೆರಿಗೆ ಸಂಗ್ರಹ ಖೋತಾ ಹಿನ್ನೆಲೆಯಲ್ಲಿ ಜಿಡಿಪಿ ಕುಸಿತ ಆಗುವ ಸಾಧ್ಯತೆಗಳಿವೆ. ಅಲ್ಲದೆ, ಕೇಂದ್ರ ಸರಕಾರ ರಾಜ್ಯಕ್ಕೆ ನೀಡಬೇಕಿರುವ ತೆರಿಗೆ ಪಾಲು 1,672 ಕೋಟಿ ರೂ.ಗಳಷ್ಟು ಕಡಿತ ಮಾಡಲಿದೆ. ಹೀಗಾಗಿ ಈ ಮೊತ್ತವನ್ನು ಪಡೆದುಕೊಳ್ಳಲು ಸರಕಾರ ಎಲ್ಲ ಪ್ರಯತ್ನಗಳನ್ನು ಮಾಡಬೇಕೆಂದು ಸಲಹೆ ಮಾಡಿದರು.

ರಾಜ್ಯದ ಬಜೆಟ್ 2.34 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇನ್ನು ಮುಂದಿನ ನಾಲ್ಕೈದು ವರ್ಷಗಳಲ್ಲಿ ಇದು ಶೇ.9ರಿಂದ 10ರಷ್ಟು ಹೆಚ್ಚಳವಾಗಲಿದೆ. 3 ಲಕ್ಷ ಕೋಟಿ ರೂ.ಗೆ ಬಜೆಟ್‌ಗೆ ಏರಿಕೆಯಾಗುವ ಸಾಧ್ಯತೆಗಳಿದ್ದು, ಆರ್ಥಿಕ ಶಿಸ್ತು ಕಾಪಾಡಲು ಆಸ್ಥೆ ವಹಿಸಬೇಕು ಎಂದು ಸೂಚಿಸಿದರು.

20 ಸಾವಿರ ಕೋಟಿ ರೂ.ವೆಚ್ಚ ಮಾಡಿ: ಸಂತ್ರಸ್ತರಿಗೆ ಮನೆ ನಿರ್ಮಾಣ, ಬೆಳೆ ಪರಿಹಾರ ಕಲ್ಪಿಸಲು ಕೇಂದ್ರದಿಂದ ಕನಿಷ್ಠ 10ಸಾವಿರ ಕೋಟಿ ರೂ. ಹಾಗೂ ರಾಜ್ಯದಿಂದ 10 ಸಾವಿರ ಕೋಟಿ ರೂ.ಸೇರಿ ಒಟ್ಟು 20 ಸಾವಿರ ಕೋಟಿ ರೂ.ವೆಚ್ಚ ಮಾಡಿ. ಎಲ್ಲರಿಗೂ ಸೂಕ್ತ ಪುನರ್ವಸತಿ ಕಲ್ಪಿಸಬೇಕೆಂದು ಆಗ್ರಹಿಸಿದರು.

ಅನ್ನಭಾಗ್ಯ, ಕ್ಷೀರಭಾಗ್ಯ, ಹಾಲಿಗೆ ಪ್ರೊತ್ಸಾಹ ಧನ, ಕೃಷಿ ಹೊಂಡ ನಿರ್ಮಾಣ, ಇಂದಿರಾ ಕ್ಯಾಂಟೀನ್ ಸೇರಿದಂತೆ ಜನಪರ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸಬೇಡಿ ಎಂದ ಅವರು, ಇಂದಿರಾ ಕ್ಯಾಂಟೀನ್‌ಗೆ ನೂರು ಕೋಟಿ ರೂ.ಅನುದಾನ ನೀಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.

ಲೋಪಗಳಿದ್ದರೆ ಸರಿಪಡಿಸಿ ಇಂದಿರಾ ಕ್ಯಾಂಟೀನ್‌ನಿಂದ ಬಡವರಿಗೆ ಅನುಕೂಲ ಆಗಲಿದ್ದು, ಗುಣಮಟ್ಟದ ಆಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದ ಅವರು, ಎಸ್ಸಿ-ಎಸ್ಟಿ ವರ್ಗದ ಉದ್ದಿಮೆದಾರರಿಗೆ ಆರ್ಥಿಕ ಶಕ್ತಿ ನೀಡಲು ವಿಶೇಷ ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News