ನೆರೆ ಪರಿಹಾರದಲ್ಲಿ ಭ್ರಷ್ಟಾಚಾರ ನಡೆದರೆ ಸಹಿಸುವುದಿಲ್ಲ: ಅಧಿಕಾರಿಗಳಿಗೆ ಸಚಿವ ಆರ್.ಅಶೋಕ್ ಎಚ್ಚರಿಕೆ

Update: 2019-10-12 14:11 GMT

ಬೆಂಗಳೂರು, ಅ.12: ನೆರೆ ಪರಿಹಾರದಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದರೆ ಸಹಿಸುವುದಿಲ್ಲ. ಒಂದು ಕ್ಷಣವು ಅಧಿಕಾರದಲ್ಲಿರಲು ಬಿಡುವುದಿಲ್ಲವೆಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ವಿಧಾನಪರಿಷತ್‌ನಲ್ಲಿ ನಿಯಮ 68ರಡಿಯಲ್ಲಿ ನೆರೆ ಪರಿಹಾರಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯ ನಂತರ ಪ್ರತಿಕ್ರಿಯಿಸಿದ ಅವರು, ಸದ್ಯ ನೆರೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟಾರೆಯಾಗಿ 1,394.31 ಕೋಟಿ ರೂ. ಜಮೆ ಮಾಡಲಾಗಿದೆ. ಇದನ್ನು ಪ್ರಾಮಾಣಿಕವಾಗಿ ಖರ್ಚು ಮಾಡಬೇಕು. ಈ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರಕಾರದ ಬೊಕ್ಕಸಕ್ಕೆ ಪ್ರತಿದಿನ ತೆರಿಗೆ ಹಣ ಬರುತ್ತಿದೆ. ಹೀಗಾಗಿ ಸರಕಾರ ಖಜಾನೆ ಖಾಲಿಯಿದೆ ಎನ್ನುವುದು ಸುಳ್ಳು. ನೆರೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರತಿಯೊಬ್ಬರಿಗೂ ಹೊಸ ಬದುಕನ್ನು ಕಟ್ಟಿಕೊಡುವಷ್ಟು ಸರಕಾರಕ್ಕೆ ಸಾಮರ್ಥ್ಯವಿದೆ. ಇದರಲ್ಲಿ ಯಾವುದೇ ಅನುಮಾನಬೇಡ. ಈಗಾಗಲೇ ಸಮರೋಪಾದಿಯಲ್ಲಿ ಪುನರ್ ವಸತಿ ಕಾಮಗಾರಿಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ರಾಜ್ಯ ಸರಕಾರ ಎನ್‌ಡಿಆರ್‌ಎಫ್ ನಿಗದಿಪಡಿಸಿದ ಪರಿಹಾರದ ಮೊತ್ತಕ್ಕಿಂತ ಹೆಚ್ಚಿನದಾಗಿ ಕೊಡಲು ನಿರ್ಧರಿಸಿದೆ. ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 6800 ರೂ.ನಿಂದ 16 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ನೀರಾವರಿ ಕೃಷಿ ಭೂಮಿಗೆ 13,500 ರೂ.ನಿಂದ 23,500 ರೂ.ಗೆ ಹೆಚ್ಚಿಸಲಾಗಿದೆ. ತೆಂಗು, ಅಡಿಕೆ, ಮಾವು ಬೆಳೆಗೆ 18 ಸಾವಿರ ರೂ.ನಿಂದ 28 ಸಾವಿರ ರೂ.ವರೆಗೆ, ರೇಷ್ಮೆ, ನೇರಳೆ ಬೆಳೆಗೆ 4,800 ರೂ.ನಿಂದ 14,800 ರೂ.ಗೆ, ಹಾಗೂ ನೇಕಾರರಿಗೆ, ಚಿಲ್ಲರೆ ಅಂಗಡಿ ವ್ಯಾಪಾರಸ್ಥರಿಗೆ 25 ಸಾವಿರ ರೂ.ವರೆಗೆ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ಈ ಮೊದಲು ನಿಗದಿಪಡಿಸಿದ ಪರಿಹಾರದ ಮೊತ್ತಕ್ಕಿಂತ 5-6 ಸಾವಿರ ಕೋಟಿ ರೂ. ಹೆಚ್ಚು ಕೊಡಲು ನಿರ್ಧರಿಸಲಾಗಿದೆ. ಆಲಮಟ್ಟಿ ಅಣೆಕಟ್ಟನ್ನು ಮತ್ತಷ್ಟು ಎತ್ತರಿಸುವುದರ ಕುರಿತು ಚಿಂತನೆ ನಡೆಸಲಾಗುತ್ತಿದೆ. ಸಂಪೂರ್ಣವಾಗಿ ಪ್ರವಾಹಕ್ಕೆ ತುತ್ತಾಗುವ ಹಳ್ಳಿಗಳನ್ನು ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿದೆ. ಹೀಗೆ ಎಲ್ಲ ರೀತಿಯಿಂದಲೂ ನೆರೆ ಸಂತ್ರಸ್ತರ ನೆರವಿಗೆ ಬರಲು ಸರಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ನೆರೆ ಹಾವಳಿಯಿಂದ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಳ್ಳಲು 5ಲಕ್ಷ ರೂ.ವನ್ನು ನೀಡಲಾಗುತ್ತಿದೆ. ಮನೆಗಳಿಗೆ ತಳಪಾಯ ಹಾಕಲು ಈಗಾಗಲೇ ಒಂದು ಲಕ್ಷ ರೂ. ಆರ್‌ಟಿಜಿಎಸ್ ಮೂಲಕ ನೀಡಲಾಗಿದೆ. ನಂತರ ಹಂತ, ಹಂತವಾಗಿ ಎಲ್ಲವನ್ನು ನೀಡಲಾಗುವುದು. ಹಾಗೂ ನೆರೆ ಸಂತ್ರಸ್ಥರಿಗೆ ರಾಜ್ಯದ ನಾನಾ ಭಾಗಗಳಿಂದ ನೆರವು ಬಂದಿದೆ. ಅಧಿಕಾರಿಗಳು ಹಗಲು-ರಾತ್ರಿ ಶ್ರಮಿಸಿದ್ದಾರೆ. ಅವರೆಲ್ಲರಿಗೂ ಸದನದ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ.

-ಆರ್.ಅಶೋಕ್, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News