ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ನಡುವೆ ವಿಧಾನಪರಿಷತ್‌ ನಲ್ಲಿ ವಿಧೇಯಕಗಳ ಅಂಗೀಕಾರ

Update: 2019-10-12 16:02 GMT

ಬೆಂಗಳೂರು, ಅ.12: ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರ್ನಾಟಕ ಧನವಿನಿಯೋಗ ವಿಧೇಯಕ-2019 ಹಾಗೂ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ-2019ನ್ನು ವಿಧಾನಪರಿಷತ್‌ನಲ್ಲಿ ಮಂಡಿಸಿ ಅಂಗೀಕಾರ ಪಡೆದರು. 

ಶನಿವಾರ ವಿಧಾನಪರಿಷತ್‌ನಲ್ಲಿ ನಿಯಮ 68ರ ಅಡಿಯಲ್ಲಿ ನೆರೆ ಪರಿಹಾರ ವಿಷಯಕ್ಕೆ ಸಂಬಂಧಿಸಿದಂತೆ ಪರಿಷತ್ ಸದಸ್ಯರು ಕಳೆದ ಎರಡು ದಿನಗಳಿಂದ ನಡೆಸಿದ ಚರ್ಚೆ ಹಾಗೂ ಪ್ರಶ್ನೆಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಉತ್ತರ ನೀಡಿದರು. ಇದಕ್ಕೆ ಸಮಾಧಾನಗೊಳ್ಳದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಕಂಡುಕೇಳರಿಯದ ರೀತಿಯಲ್ಲಿ ರಾಜ್ಯಕ್ಕೆ ನೆರೆ ಬಂದು 20ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಅಪಾರವಾದ ನಷ್ಟ ಉಂಟಾಗಿದೆ. ನಷ್ಟದ ಪ್ರಮಾಣವು ಲೆಕ್ಕಕ್ಕೆ ಸಿಗದಷ್ಟು ಹಾನಿಯಾಗಿದೆ. ಆದರೆ, ಕೇಂದ್ರ ಸರಕಾರ ಮಾತ್ರ ಸೂಕ್ತ ಪರಿಹಾರ ನೀಡುವಲ್ಲಿ ನಿರ್ಲಕ್ಷ ಧೋರಣೆ ಅನುಸರಿಸುತ್ತಿದೆ ಎಂದರು.

ನೆರೆ ಸಂತ್ರಸ್ತರಿಗೆ ಬದುಕನ್ನು ಕಟ್ಟಿಕೊಡಬೇಕಾದರೆ ರಾಜ್ಯದಲ್ಲಿ ಸಂಭವಿಸಿದ ನೆರೆ ಹಾವಳಿಯನ್ನು ರಾಷ್ಟ್ರೀಯ ವಿಪ್ಪತ್ತೆಂದು ಘೋಷಿಸಬೇಕು. ಆಗ ಮಾತ್ರ ಒಂದಷ್ಟು ಪ್ರಮಾಣದಲ್ಲಿ ಪರಿಹಾರ ಸಿಗಲು ಸಾಧ್ಯ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರಕ್ಕೆ ಒತ್ತಾಯ ಮಾಡಲು ಧೈರ್ಯ ಸಾಲುತ್ತಿಲ್ಲ. ಹೀಗಾಗಿ ರಾಜ್ಯ ಸರಕಾರ ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಲಿ. ನಾವು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುತ್ತೇವೆಂದು ಹೇಳಿದರು.

ನೆರೆ ಹಾವಳಿಯಿಂದ ಮನೆ ಕಳೆದುಕೊಂಡವರಿಗೆ ಕೇವಲ 5ಲಕ್ಷ ರೂ.ವೆಚ್ಚದಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಹಳ್ಳಿಗಳೆಂದರೆ ಕೇವಲ ಮನುಷ್ಯರಷ್ಟೆ ವಾಸಿಸುವುದಿಲ್ಲ. ನಮ್ಮ ಜೊತೆ ಹಸು, ಕೋಳಿ, ಕುರಿ ಸೇರಿದಂತೆ ಸಾಕು ಪ್ರಾಣಿಗಳು, ಕೃಷಿ ಯಂತ್ರೋಪಕರಣಗಳು ಇರುತ್ತದೆ. ಇದಕ್ಕಾಗಿ ವಿಸ್ತಾರವಾದ ಮನೆ ಬೇಕಾಗುತ್ತದೆ. ಹೀಗಾಗಿ ಮನೆ ಕಟ್ಟಿಕೊಳ್ಳಲು ಕನಿಷ್ಟ 10ಲಕ್ಷ ರೂ.ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿ.ಎಸ್.ಯಡಿಯೂರಪ್ಪ, ರಾಜ್ಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿದಿದ್ದರೆ, ಸಾಕಷ್ಟು ಹಣವನ್ನು ಕೊಡುತ್ತಿದ್ದೆ. ಆದರೂ, ಎನ್‌ಡಿಆರ್‌ಎಫ್ ನಿಗದಿ ಪಡಿಸಿದ ಮೊತ್ತಕ್ಕಿಂತಲೂ ಹೆಚ್ಚಿನ ನೆರವು ನೀಡಿದ್ದೇನೆ. ಹೀಗಾಗಿ ಧನವಿನಿಯೋಗ ವಿಧೇಯಕ ಅಂಗೀಕಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು. ಆದರೂ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮುಂದುವರೆಸಿದಾಗ, ಇದರ ನಡುವೆ ವಿಧೇಯಕವನ್ನು ಓದಿ ಬಹುಮತದ ಮೂಲಕ ಅಂಗೀಕಾರ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News