ವಿಧಾನ ಪರಿಷತ್‌ ನಲ್ಲಿ ನಗೆಗಡಲಲ್ಲಿ ತೇಲಿಸಿದ 'ಕಬಡ್ಡಿ'

Update: 2019-10-12 16:06 GMT
ಫೈಲ್ ಚಿತ್ರ

ಬೆಂಗಳೂರ, ಅ.12: ವಿಧಾನ ಪರಿಷತ್ ಕಲಾಪದಲ್ಲಿ ಬ್ಯಾಸ್ಕೆಟ್‌ಬಾಲ್ ಕ್ರೀಡೆ ಸಂಬಂಧ ನಡೆದ ಚರ್ಚೆಯ ನಡುವೆ ಕಬಡ್ಡಿ ನುಸುಳುವ ಮೂಲಕ ಇಡೀ ಸದನವನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

ಕಾಂಗ್ರೆಸ್ ಸದಸ್ಯ ಕೆ.ಗೋವಿಂದರಾಜು 2019ರಿಂದ 2023ರವರೆಗೆ ಭಾರತೀಯ ಬ್ಯಾಸ್ಕೆಟ್ ಬಾಲ್ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಹಾಗೂ ಅಂತಾರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್‌ನ ಸದಸ್ಯತ್ವ ಪಡೆದಿರುವ ಸಂಬಂಧ ವಿಧಾನಪರಿಷತ್‌ನಲ್ಲಿ ಪಕ್ಷಭೇದ ಮರೆತು ಎಲ್ಲ ಸದಸ್ಯರು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ, ಇತ್ತೀಚೆಗೆ ಜನಪ್ರತಿನಿಧಿಗಳು ಸದಾ ಮಾತಿನ ಚಕಮಕಿ ನಡೆಸುವುದರಲ್ಲೇ ಮುಳುಗಿದ್ದಾರೆ. ಆದರೆ, ಹಿಂದಿನ ದಿನಗಳಲ್ಲಿ ಶಾಸಕರ ದಿನಾಚರಣೆ ಆಚರಿಸಿ, ಕಬಡ್ಡಿ, ಟೆನಿಸ್ ಸೇರಿದಂತೆ ವಿವಿಧ ಆಟಗಳನ್ನು ಆಡುತ್ತಿದ್ದೆವು. ಅದು ಪುನಃ ಆರಂಭವಾಗಬೇಕೆಂದು ಸಭಾಪತಿಗಳಲ್ಲಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ, ಕಬಡ್ಡಿ ಬೇಡ. ಬಿಜೆಪಿಯವರು ಕಬಡ್ಡಿಯಲ್ಲಿ ಫೇಮಸ್ಸು, ಈಗಾಗಲೇ 17 ಜನರನ್ನು ಎಳೆದುಕೊಂಡು ಹೋಗಿದ್ದಾರೆ ಎನ್ನುತ್ತಲೆ, ಸದನ ನಗೆಗಡಲಿನಲ್ಲಿ ತೇಲಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಆರ್.ಅಶೋಕ್, ನಮ್ಮ ಕಬಡ್ಡಿ ಈಗ ಆರಂಭವಾಗಿದೆ. ನಮ್ಮದು ಪ್ರೊ.ಕಬಡ್ಡಿ, ಭಾರಿ ಫಾಸ್ಟ್ ಎಂದು ಉತ್ತರಿಸಿದರು. ಇಷ್ಟಕ್ಕೆ ಸುಮ್ಮನಾಗದೇ ಮಧ್ಯೆ ಪ್ರವೇಶಿಸಿದ ಐವಾನ್ ಡಿಸೋಜಾ ಕಬಡ್ಡಿ ರಾಜಕಾರಣಿಗಳ ಪ್ರೀತಿಯ ಆಟ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಸದನ ಪ್ರವೇಶ ಮಾಡಿದ ಕ್ರೀಡಾ ಸಚಿವ ಕೆ.ಎಸ್.ಈಶ್ವರಪ್ಪ ಗೋವಿಂದರಾಜುಗೆ ಅಭಿನಂದನೆ ಸಲ್ಲಿಸಿ, ಗೋವಿಂದರಾಜು ಉತ್ತಮ ಕ್ರೀಡಾಪಟು. ಅವರ ಸಲಹೆ ಪಡೆದು ನಾವು ಕ್ರೀಡಾ ಪ್ರಗತಿಗೆ ಮುಂದುವರಿಯುತ್ತೇವೆ. ಹಿಂದೆ ಇವರ ಸರಕಾರ ಇದ್ದಾಗ ಅವರನ್ನು ಕ್ರೀಡಾ ಸಚಿವರನ್ನಾಗಿ ಮಾಡಿ ಎಂದು ಸಲಹೆ ಕೊಟ್ಟಿದ್ದೆ. ಯಾಕೆ ಆಗಲಿಲ್ಲವೊ ಗೊತ್ತಿಲ್ಲವೆಂದರು.

ಅದಕ್ಕೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ನೀವು ಆಗಲೇ 17 ಮಂದಿಯನ್ನು ಕರೆದುಕೊಂಡು ಹೋಗಿದ್ದೀರಿ. ಇವರನ್ನು 18 ನೇಯವರನ್ನಾಗಿ ಕರೆದುಕೊಂಡು ಹೋಗಿ ಸಚಿವರನ್ನಾಗಿ ಮಾಡಿ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅದಕ್ಕೇನು ಅವರೂ ಬರಲಿ, ಅಲ್ಲದೇ ಮುಸ್ಲಿಂ ಕೋಟಾದಲ್ಲಿ ಸಿ.ಎಂ. ಇಬ್ರಾಹಿಂ ಕೂಡ ಬಂದು ಸಚಿವರಾಗಲಿ ಎಂದು ಹೇಳುತ್ತಿದ್ದಂತೆ ಸದನದಲ್ಲಿ ಕೊಂಚ ಗದ್ದಲ ಉಂಟಾಯಿತು. ಈ ವೇಳೆ ರಿಝ್ವಾನ್ ಹರ್ಷದ್, ಬಿಜೆಪಿ ಜಾತಿ, ಧರ್ಮದ ವಿಚಾರದಲ್ಲಿ ರಾಜಕೀಯ ಮಾಡುವುದಷ್ಟೆ ಗೊತ್ತಿದೆ ಎಂದು ತಿರುಗೇಟು ನೀಡಿದರು. ತಕ್ಷಣ ಎಚ್ಚರಗೊಂಡ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ ವಿಷಯವನ್ನು ಬೇರೆಡೆಗೆ ತಿರುಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News