ಕಾಂಗ್ರೆಸ್‌ನಿಂದ ಹೊರಬನ್ನಿ: ಸಿಂಧಿಯಾಗೆ ಬಿಜೆಪಿ ಒತ್ತಾಯ

Update: 2019-10-13 03:32 GMT
ಜ್ಯೋತಿರಾದಿತ್ಯ ಸಿಂಧಿಯಾ

ಭೋಪಾಲ್: ಮಧ್ಯಪ್ರದೇಶ ಸರ್ಕಾರ ರೈತರ ಸಾಲ ಮನ್ನಾ ಮಾಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷ ತ್ಯಜಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಗೋಪಾಲ್ ಭಾರ್ಗವ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿಲ್ಲ ಎಂದು ಸಿಂಧಿಯಾ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಶುಕ್ರವಾರ ಗಂಭೀರ ಆರೋಪ ಮಾಡಿದ್ದರು. ಜತೆಗೆ ಜನತೆಗೆ ನೀಡಿದ ಭರವಸೆಯನ್ನು ರಾಜ್ಯ ಸರ್ಕಾರ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ "ಕಾಂಗ್ರೆಸ್ ಮುಖಂಡರೇ ಕಮಲ್‌ನಾಥ್ ಅವರಿಗೆ ಕನ್ನಡಿ ತೋರಿಸುತ್ತಿದ್ದಾರೆ" ಎಂದು ಲೇವಡಿ ಮಾಡಿದೆ.

ತಮ್ಮ ಪಕ್ಷದ ವೈಫಲ್ಯದ ಬಗ್ಗೆ ನಿಜವಾಗಿಯೂ ಸಿಂಧಿಯಾ ಅವರಿಗೆ ಮುಜುಗರವಾಗಿದ್ದರೆ, ಅವರು ಪಕ್ಷ ತ್ಯಜಿಸಬೇಕು. ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದ್ದರಿಂದ ಸಿಂಧಿಯಾ ಹೇಳಿಕೆ ಸರಿಯಾಗಿಯೇ ಇದೆ ಎಂದು ಭಾರ್ಗವ ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಅವರು ಕಾಂಗ್ರೆಸ್ ಪಕ್ಷವನ್ನು "ಧೂರ್ತ ಪಕ್ಷ" ಎಂದು ಟೀಕಿಸಿದ್ದು, ಬಿಡಾಡಿ ಹಸುಗಳ ವಿಚಾರದಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಮತ್ತು ಮುಖ್ಯಮಂತ್ರಿ ಕಮಲನಾಥ್ ನಡುವಿನ ಟ್ವೀಟ್ ಸಮರವನ್ನು ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News