ಪ್ರವಾಹ ಪೀಡಿತ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ಒದಗಿಸಿ

Update: 2019-10-13 18:32 GMT

ಮಾನ್ಯರೇ,

ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಎರಡು ತಿಂಗಳುಗಳಿಂದ ಪಠ್ಯಪುಸ್ತಕಗಳು ಇಲ್ಲದೆಯೇ ಮಕ್ಕಳ ಪರಿಸ್ಥಿತಿ ಶೋಚನೀಯವಾಗಿದೆ. ಚಿಕ್ಕೋಡಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಹಾಗೂ ನೆರೆಯಿಂದಾಗಿ ವಿದ್ಯಾರ್ಥಿಗಳ ಪಠ್ಯಪುಸ್ತಕಗಳು ಕೊಚ್ಚಿಕೊಂಡು ಹೋಗಿವೆ. ಕನ್ನಡ, ಮರಾಠಿ, ಉರ್ದು ಮಾಧ್ಯಮ ಸೇರಿದಂತೆ 7.31 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ನೀರುಪಾಲಾಗಿರುವುದರಿಂದ, ಮಕ್ಕಳಿಗೆ ಓದಲು ಪಠ್ಯಪುಸ್ತಕಗಳು ಹಾಗೂ ಬರೆಯಲು ಲೇಖನ ಸಾಮಗ್ರಿಗಳು ಇಲ್ಲದಂತಾಗಿವೆ. ಪುಸ್ತಕಗಳಷ್ಟೇ ಅಲ್ಲ, ಅನೇಕ ಊರುಗಳಲ್ಲಿ ಶಾಲಾ ಕೊಠಡಿಗಳೇ ಭೀಕರ ಮಳೆ, ಪ್ರವಾಹಕ್ಕೆ ತುತ್ತಾಗಿವೆ. ಅಂತಹ ಪ್ರದೇಶಗಳಲ್ಲಿ ದೇವಸ್ಥಾನ ಹಾಗೂ ಸಮುದಾಯ ಭವನಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಕೆಲವೆಡೆ ಮರಗಳಡಿ ತರಗತಿಗಳನ್ನು ನಡೆಸಬೇಕಾದ ಅನಿವಾರ್ಯವೂ ಇದೆ. ಇಂತಹ ಜಾಗಗಳಲ್ಲಿ ಕುಡಿಯುವ ನೀರು, ಶೌಚಾಲಯದಂತಹ ಮೂಲ ಸೌಕರ್ಯಗಳೇ ಇಲ್ಲ. ನೆರೆ ದುರಂತ ಸಂಭವಿಸಿ ಎರಡು ತಿಂಗಳು ಕಳೆದರೂ ಪರಿಸ್ಥಿತಿ ಸುಧಾರಿಸಿಲ್ಲ ಎನ್ನುವುದು ಆತಂಕ ಹುಟ್ಟಿಸುವ ಸಂಗತಿ. ಪ್ರವಾಹಪೀಡಿತ ಪ್ರದೇಶಗಳ ಅನೇಕ ಶಾಲೆಗಳಲ್ಲಿ ಕಲಿಕಾ ಸಾಮಗ್ರಿಗಳಿಲ್ಲದೆಯೇ ವಿದ್ಯಾರ್ಥಿಗಳು ಅರ್ಧವಾರ್ಷಿಕ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಯ ನಂತರದ ದಸರಾ ರಜೆಯೂ ಮುಗಿಯುತ್ತಿದ್ದು, ಶಾಲೆಗಳ ಬಾಗಿಲುಗಳು ಮತ್ತೆ ತೆರೆಯಲಿವೆ. ಆದರೂ ವಿದ್ಯಾರ್ಥಿಗಳ ಸಂಕಷ್ಟ ಬಗೆಹರಿದಿಲ್ಲ. ಈ ನಡುವೆ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಸರಕಾರ ಉತ್ಸುಕವಾಗಿದೆ. ಪಠ್ಯಪುಸ್ತಕಗಳೇ ಇಲ್ಲದಿರುವ ಸಂದರ್ಭದಲ್ಲಿ ಪಬ್ಲಿಕ್ ಪರೀಕ್ಷೆಯ ಆತಂಕವನ್ನೂ ವಿದ್ಯಾರ್ಥಿಗಳ ಜೊತೆಗೆ ಪಾಲಕರು, ಬೋಧಕರು ಎದುರಿಸಬೇಕಾಗಿದೆ. ಕಲಿಕೆಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ. ಪಠ್ಯಪುಸ್ತಕಗಳ ಸರಬರಾಜನ್ನು ಸರಕಾರ ಅತ್ಯಂತ ಆದ್ಯತೆಯ ವಿಷಯವನ್ನಾಗಿ ಪರಿಗಣಿಸಬೇಕು. ಶಾಲಾ ಕೊಠಡಿಗಳ ದುರಸ್ತಿಯೂ ತ್ವರಿತವಾಗಿ ನಡೆಯಬೇಕು. ಸುರಕ್ಷಿತ ಹಾಗೂ ಆರೋಗ್ಯಕರ ಪರಿಸರದಲ್ಲಿ ಮಕ್ಕಳ ಕಲಿಕೆ ನಿರಾತಂಕವಾಗಿ ನಡೆಯುವ ಪರಿಸ್ಥಿತಿಯನ್ನು ಸರಕಾರ ಕಲ್ಪಿಸಬೇಕು. ಪಠ್ಯಪುಸ್ತಕಗಳ ಸರಬರಾಜಿನಲ್ಲಿ ಏರುಪೇರಾಗುವುದು ಹೊಸತೇನಲ್ಲ. ಶೈಕ್ಷಣಿಕ ವರ್ಷದಲ್ಲಿ ಅರ್ಧ ಭಾಗ ಮುಗಿಯುತ್ತಾ ಬಂದರೂ ಪುಸ್ತಕಗಳ ಸರಬರಾಜು ಪೂರ್ಣಗೊಳ್ಳದಿರುವ ದೂರುಗಳನ್ನು ಪ್ರತಿವರ್ಷ ಕೇಳುತ್ತಲೇ ಬಂದಿದ್ದೇವೆ. ಇಂಥ ದೂರುಗಳ ಕುರಿತಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂವೇದನೆಯನ್ನೇ ಕಳೆದುಕೊಂಡಿರುವಂತಿದೆ. ಗುಣಮಟ್ಟದ ಶಿಕ್ಷಣವನ್ನು ನೀಡುವ ಬಗ್ಗೆ ಉತ್ಸುಕರಾಗಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಮ್ಮ ಇಲಾಖೆಯ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕಾಗಿದೆ. ಆ ನಿಟ್ಟಿನಲ್ಲಿ ಅವರು, ಪ್ರವಾಹಪೀಡಿತ ಪ್ರದೇಶಗಳಲ್ಲಿ ಅಸ್ತವ್ಯಸ್ತಗೊಂಡಿರುವ ಕಲಿಕೆಯ ವ್ಯವಸ್ಥೆಯನ್ನು ಹಳಿಗೆ ತರುವ ಬಗ್ಗೆ ಮೊದಲು ಗಮನ ಹರಿಸಬೇಕು.

ಸಂತೋಷ ಜಾಬೀನ್, ಸುಲೇಪೇಟ

Writer - ಸಂತೋಷ ಜಾಬೀನ್, ಸುಲೇಪೇಟ

contributor

Editor - ಸಂತೋಷ ಜಾಬೀನ್, ಸುಲೇಪೇಟ

contributor

Similar News