×
Ad

ಬೆಂಗಳೂರು: ಬಿಜೆಪಿ ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸಿದ ಸುದ್ದಿ ವಾಹಿನಿಗಳು

Update: 2019-10-14 19:23 IST

ಬೆಂಗಳೂರು, ಅ.14: ರಾಜ್ಯ ಬಿಜೆಪಿ ಸರಕಾರದ ಮಾಧ್ಯಮಗಳ ವಿರುದ್ಧದ ಧೋರಣೆ ಖಂಡಿಸಿ ಇಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ನಡೆಸಿದ ಸುದ್ದಿಗೋಷ್ಠಿಯನ್ನು ಸುದ್ದಿ ವಾಹಿನಿಗಳು ಬಹಿಷ್ಕರಿಸಿದ ಘಟನೆ ನಡೆಯಿತು.

ಸೋಮವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಸುದ್ದಿಗೋಷ್ಠಿಯನ್ನು ಸುದ್ದಿ ವಾಹಿನಿಗಳು ಬಹಿಷ್ಕರಿಸಿದ್ದು, ಸರಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭೆಯ ಕಲಾಪವನ್ನು ಚಿತ್ರೀಕರಿಸದಂತೆ ಖಾಸಗಿ ಸುದ್ದಿ ವಾಹಿನಿಗಳ ಕ್ಯಾಮರಗಳನ್ನು ನಿಷೇಧಿಸಿದ ಬೆನ್ನಲ್ಲೆ, ವಿಧಾನಸೌಧದಲ್ಲಿ ನಿನ್ನೆ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದರೂ ಆ ಕಾರ್ಯಕ್ರಮದ ವರದಿ ಮಾಡಲು ಅವಕಾಶ ಸಿಗದೆ ಇರುವುದರಿಂದ ಮಾಧ್ಯಮ ಪ್ರತಿನಿಧಿಗಳು ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಿದ್ದರು. ಮಾಧ್ಯಮಗಳನ್ನು ನಿಷೇಧಿಸುತ್ತಿರುವ ಬಿಜೆಪಿ ಕ್ರಮ ಖಂಡಿಸಿ, ಇಂದು ಕೂಡಾ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ನಡೆಸಿದ ಸುದ್ದಿಗೋಷ್ಠಿಯನ್ನು ಸುದ್ದಿ ವಾಹಿನಿಗಳು ಬಹಿಷ್ಕರಿಸಿದವು.

"ಕಾಂಗ್ರೆಸ್ ವರದಿ ಸುಳ್ಳುಗಳ ಕಂತೆ"

ರಾಜ್ಯದ ನೆರೆ ಸಂತ್ರಸ್ತರ ಸ್ಥಿತಿ-ಗತಿ ಕುರಿತು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ವರದಿಯು ಶುದ್ಧ ಸುಳ್ಳುಗಳ ಕಂತೆಯಾಗಿದೆ. ವಾಸ್ತವ ಪರಿಸ್ಥಿತಿಗೂ ಅದರಲ್ಲಿನ ಅಂಕಿ ಅಂಶಗಳಿಗೂ ಯಾವುದೇ ಸಾಮ್ಯತೆಯಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಆರೋಪಿಸಿದರು.

ಇಂದು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರದ ವತಿಯಿಂದ ನೆರೆ ಸಂತ್ರಸ್ತರಿಗೆ ನೆರವು ಒದಗಿಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ. ವಿರೋಧ ಪಕ್ಷಗಳು ಆರೋಪಿಸುತ್ತಿರುವಂತೆ ನೆರೆ ಸಂತ್ರಸ್ತರ ವಿಚಾರದಲ್ಲಿ ಯಾವುದೇ ಲೋಪಗಳು ಆಗುತ್ತಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ 35 ಸಾವಿರ ಕಿ.ಮಿ.ರಸ್ತೆ ಹಾಳಾಗಿದೆ ಎಂದಿದ್ದಾರೆ. ಆದರೆ, ವಾಸ್ತವವಾಗಿ 5 ಸಾವಿರ ಕಿ.ಮೀ.ರಸ್ತೆ ಮಾತ್ರ ಹಾಳಾಗಿದೆ. 30 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕಾಂಗ್ರೆಸ್ ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಅಷ್ಟೊಂದು ಪ್ರಮಾಣದಲ್ಲಿ ಬೆಳೆ ಹಾನಿಯಾಗಿಲ್ಲ ಎಂದು ಅವರು ಹೇಳಿದರು.

ಮೂರು ಲಕ್ಷ ಮನೆಗಳು, ಮೂರು ಸಾವಿರ ಗ್ರಾಮಗಳು ಜಲಾವೃತಗೊಂಡಿವೆ ಎಂದು ವರದಿಯಲ್ಲಿ ಸುಳ್ಳು ಅಂಶಗಳನ್ನು ಸೇರಿಸಲಾಗಿದೆ. ಒಂದು ಸಾವಿರ ಗ್ರಾಮಗಳು ನೆಲ ಸಮವಾಗಿವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಹಾಗಿದ್ದಲ್ಲಿ, ಆ ಗ್ರಾಮಗಳ ಪಟ್ಟಿಯನ್ನು ಅವರು ನೀಡಲಿ ಎಂದು ರವಿಕುಮಾರ್ ಆಗ್ರಹಿಸಿದರು.

ಮಾಜಿ ಸಂಸದ ಧ್ರುವ ನಾರಾಯಣ್, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಎಚ್.ಸಿ.ಮಹದೇವಪ್ಪ ನೀಡಿರುವ ವರದಿಗಳನ್ನು ನಂಬಲು ಸಾಧ್ಯವೇ? ಕಾಂಗ್ರೆಸ್ ವರದಿಯಲ್ಲಿ ಕೇವಲ ಆರೋಪಗಳು ಹಾಗೂ ಭಾವಚಿತ್ರಗಳೇ ತುಂಬಿಕೊಂಡಿವೆ ಎಂದು ಅವರು ಟೀಕಿಸಿದರು. ರಾಜ್ಯವು ಶತಮಾನದ ಬಳಿಕ ಭೀಕರ ಪ್ರವಾಹವನ್ನು ಎದುರಿಸಿದೆ. ಲಕ್ಷಾಂತರ ಜನ ತಮ್ಮ ದಿನನಿತ್ಯದ ಬದುಕನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಅವರ ನೆರವಿಗಾಗಿ ದಾನಿಗಳು, ಸಂಘ ಸಂಸ್ಥೆಗಳ ಜೊತೆಯಲ್ಲಿ ನಮ್ಮ ಪಕ್ಷವು ನಿಂತಿದೆ. ಸಂತ್ರಸ್ತರಿಗೆ ಅಗತ್ಯವಿರುವ ವಸ್ತುಗಳನ್ನು ಕಳುಹಿಸಿಕೊಡುವಲ್ಲಿ ನಾವು ಮುಂಚೂಣಿಯಲ್ಲಿದ್ದೆವು ಎಂದು ರವಿಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News