ದಕ್ಷಿಣ ಆಫ್ರಿಕಾ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದ ಭಾರತ ಮಹಿಳಾ ತಂಡ

Update: 2019-10-15 05:10 GMT

►3ನೇ ಏಕದಿನ

ವಡೋದರ, ಅ.14: ಬೌಲರ್‌ಗಳು ಅದರಲ್ಲೂ ಮುಖ್ಯವಾಗಿ ಸ್ಪಿನ್ನರ್‌ಗಳ ಅದ್ಭುತ ಬೌಲಿಂಗ್ ಪ್ರದರ್ಶನದ ನೆರವಿನಿಂದ ಭಾರತದ ಮಹಿಳಾ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಕಡಿಮೆ ಮೊತ್ತದ ಮೂರನೇ ಏಕದಿನ ಪಂದ್ಯದಲ್ಲಿ ಆರು ರನ್ ಅಂತರದ ರೋಚಕ ಗೆಲುವು ದಾಖಲಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿ ಕ್ಲೀನ್‌ಸ್ವೀಪ್ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿ ಕೇವಲ 146 ರನ್ ಗಳಿಸಿದ್ದ ಭಾರತ ಏಕ್ತಾ ಬಿಶ್ತ್, ದೀಪ್ತಿ ಶರ್ಮಾ ಹಾಗೂ ರಾಜೇಶ್ವರಿ ಗಾಯಕ್ವಾಡ್ ಅವರ ಅಮೋಘ ಬೌಲಿಂಗ್ ನೆರವಿನಿಂದ ಎದುರಾಳಿ ಆಫ್ರಿಕಾ ತಂಡವನ್ನು 48 ಓವರ್‌ಗಳಲ್ಲಿ 140 ರನ್‌ಗೆ ನಿಯಂತ್ರಿಸಿ ಆರು ರನ್‌ಗಳ ಅನಿರೀಕ್ಷಿತ ಜಯ ದಾಖಲಿಸಿತು.

ರಿಲಯನ್ಸ್ ಸ್ಟೇಡಿಯಂನಲ್ಲಿ ಸೋಮವಾರ ಗೆಲ್ಲಲು 147 ರನ್ ಸುಲಭ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಭಾರತದ ಬೌಲರ್‌ಗಳು ದಕ್ಷಿಣ ಆಫ್ರಿಕಾ ಆಟಗಾರ್ತಿಯರಿಗೆ ತಲೆ ಎತ್ತಲು ಅವಕಾಶ ನೀಡಲಿಲ್ಲ. ಮರಿಝಾನೆ ಕಾಪ್(29), ನಾಯಕಿ ಸುನ್ ಲುಸ್(24)ಹಾಗೂ ಲೌರಾ ವಲ್ವಾರ್ಟ್(23) ಹೊರತುಪಡಿಸಿ ಉಳಿದವರು ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದ ಏಕ್ತಾ ಬಿಶ್ತ್ 10 ಓವರ್‌ಗಳಲ್ಲಿ ಕೇವಲ 23 ರನ್ ಬಿಟ್ಟುಕೊಟ್ಟು ಮೂರು ವಿಕೆಟ್‌ಗಳನ್ನು ಉರುಳಿಸಿದರು. ತಲಾ 2 ವಿಕೆಟ್‌ಗಳನ್ನು ಪಡೆದ ದೀಪ್ತಿ ಹಾಗೂ ರಾಜೇಶ್ವರಿ ಅವರು ಬಿಶ್ತ್‌ಗೆ ಸಾಥ್ ನೀಡಿದರು.

 ಬ್ಯಾಟಿಂಗ್ ಕೌಶಲ್ಯಕ್ಕೆ ಖ್ಯಾತಿ ಪಡೆದಿರುವ ಹರ್ಮನ್‌ಪ್ರೀತ್ ಕೌರ್ ಹಾಗೂ ಜೆಮಿಮಾ ರೋಡ್ರಿಗಸ್ ತಲಾ ಒಂದು ವಿಕೆಟ್ ಪಡದು ಭಾರತದ ಗೆಲುವಿಗೆ ನೆರವಾದರು. ಇದಕ್ಕೂ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೊದಲೆರಡು ಓವರ್‌ಗಳಲ್ಲಿ ಇಬ್ಬರೂ ಆರಂಭಿಕ ಆಟಗಾರ್ತಿಯರ ವಿಕೆಟ್ ಕಳೆದುಕೊಂಡಿತು. ನಾಯಕಿ ಮಿಥಾಲಿ ರಾಜ್ ಅವರು ಪೂನಂ ರಾವತ್ ತಂಡವನ್ನು ಆಧರಿಸಲು ಯತ್ನಿಸಿದರು. ಕ್ರಮವಾಗಿ 11 ಹಾಗೂ 15 ರನ್ ಗಳಿಸಿದ ಬಳಿಕ ಇಬ್ಬರೂ ಬೆನ್ನುಬೆನ್ನಿಗೆ ವಿಕೆಟ್ ಒಪ್ಪಿಸಿದರು.

ಹರ್ಮನ್‌ಪ್ರೀತ್ 76 ಎಸೆತಗಳಲ್ಲಿ 38 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಶಿಖಾ ಪಾಂಡೆ ಕೆಳ ಕ್ರಮಾಂಕದಲ್ಲಿ ಅಮೂಲ್ಯ ಕಾಣಿಕೆ(35) ನೀಡಿದರು. ಈ ಮೂಲಕ ಭಾರತದ ಮೊತ್ತವನ್ನು 150ರ ಗಡಿ ತಲುಪಲು ನೆರವಾದರು. ಭಾರತ ಸರಣಿಯ ಮೊದಲೆರಡು ಪಂದ್ಯಗಳನ್ನು ಕ್ರಮವಾಗಿ 8 ಹಾಗೂ 6 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News