ಕಾನೂನು ತಂಡಕ್ಕೆ ನಾಮಪತ್ರ ಸಲ್ಲಿಸಿದ ಗಂಗುಲಿ

Update: 2019-10-15 05:15 GMT

ಹೊಸದಿಲ್ಲಿ, ಅ.14: ಸೌರವ್ ಗಂಗುಲಿ ಹಾಗೂ ಅವರ ಬಳಗ ವಿವಿಧ ಪದಾಧಿಕಾರಿಗಳ ಹುದ್ದೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಮುಂಬೈನಲ್ಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಮುಖ್ಯ ಕಚೇರಿಗೆ ಭೇಟಿ ನೀಡಿತು. ಆದರೆ, ನಾಮಪತ್ರ ಸ್ವೀಕರಿಸಬೇಕಾಗಿದ್ದ ಚುನಾವಣಾಧಿಕಾರಿ ಎನ್.ಗೋಪಾಲಸ್ವಾಮಿ ಗೈರಾಗುವ ಮೂಲಕ ಶಾಕ್ ನೀಡಿದರು. ಸ್ವಾಮಿ ಅನುಪಸ್ಥಿತಿಯಲ್ಲಿ ಬಿಸಿಸಿಐ ಕಾನೂನು ತಂಡಕ್ಕೆೆ ನಾಮಪತ್ರ ಸಲ್ಲಿಸಿ ವಾಪಸಾಗಬೇಕಾಯಿತು.

ಗೋಪಾಲಸ್ವಾಮಿ ಮಧ್ಯಾಹ್ನ 3 ಗಂಟೆಯ ತನಕವೂ ಬಿಸಿಸಿಐ ಕಚೇರಿಗೆ ಬಾರದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬಿಸಿಸಿಐ ಕಾನೂನು ಸಮಿತಿಗೆ ಗಂಗುಲಿ ಬಳಗ ನಾಮಪತ್ರ ಸಲ್ಲಿಸಿತು. ‘‘ನಾವು ಚುನಾವಣಾಧಿಕಾರಿಗಳಿಗಾಗಿ ಕಾದಿದ್ದೆವು. ಆದರೆ, ಅಂತಿಮವಾಗಿ ಮಧ್ಯಾಹ್ನ 2:45ರ ಸುಮಾರಿಗೆ ನಾಮಪತ್ರವನ್ನು ಬಿಸಿಸಿಐ ಕಾನೂನು ತಂಡಕ್ಕೆ ಸಲ್ಲಿಸಿದೆವು. ನಾಮಪತ್ರ ಸಲ್ಲಿಸಲು ಮಧ್ಯಾಹ್ನ 3 ಗಂಟೆ ಗಡುವಾಗಿತ್ತು. ನಾವು 3 ಗಂಟೆಯ ತನಕ ಕಾದು ಅಲ್ಲಿಂದ ನಿರ್ಗಮಿಸಿದೆವು’’ ಎಂದು ಪದಾಧಿಕಾರಿಯಾಗಿ ನೇಮಕಗೊಂಡಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚುನಾವಣಾಧಿಕಾರಿ ಕಳುಹಿಸಿರುವ ನೋಟಿಸ್ ಪ್ರಕಾರ ಬಿಸಿಸಿಐನ ಎಲ್ಲ ಸದಸ್ಯರು ಸೋಮವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 3 ರ ತನಕ ನಾಮಪತ್ರ ಸಲ್ಲಿಸಬೇಕು. ರವಿವಾರ ಮುಂಬೈನಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ಗಂಗುಲಿ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದ್ದು, ಬಿಸಿಸಿಐ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕರ್ನಾಟಕದ ಬ್ರಿಜೇಶ್ ಪಟೇಲ್ ಐಪಿಎಲ್ ಚೇರ್ಮನ್ ಆಗಿ ನೇಮಿಸಲು ನಿರ್ಧರಿಸಲಾಗಿತ್ತು.

   ಇಂದು ಮತ್ತೆ ಸಭೆ ಸೇರಿದ ಬಿಸಿಸಿಐ ಸದಸ್ಯರುಗಳು ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಅವರನ್ನು ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಹುದ್ದೆಗೆ, ಕೇಂದ್ರ ಸಚಿವ ಹಾಗೂ ಮಾಜಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರ ಕಿರಿಯ ಸಹೋದರ ಅರುಣ್ ಧುಮಾಲ್ ಖಜಾಂಚಿ ಹಾಗೂ ಜಯೇಶ್ ಜಾರ್ಜ್ ಅವರನ್ನು ಜೊತೆ ಕಾರ್ಯದರ್ಶಿ ಹುದ್ದೆಗೆ ಅಭ್ಯರ್ಥಿಯನ್ನಾಗಿಸಲು ನಿರ್ಧರಿಸಿತು.

33 ತಿಂಗಳ ಕಾಲ ಬಿಸಿಸಿಐ ಆಡಳಿತ ನೋಡಿಕೊಂಡಿದ್ದ ಆಡಳಿತಾಧಿಕಾರಿಗಳ ಸಮಿತಿ ಅ.23ರಂದು ಬಿಸಿಸಿಐ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ ನೂತನ ಪದಾಧಿಕಾರಿಗಳು ಅಧಿಕೃತವಾಗಿ ಬಿಸಿಸಿಐ ಆಡಳಿತದ ಮೇಲೆ ಹಿಡಿತ ಸಾಧಿಸಲಿದ್ದಾರೆ. ಬಿಸಿಸಿಐ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News