ವಿರಾಟ್ ಕೊಹ್ಲಿಗೆ ಮೂರನೇ ಸ್ಥಾನ

Update: 2019-10-15 05:34 GMT

ಹೊಸದಿಲ್ಲಿ, ಅ.14: ಈವರೆಗೆ 50 ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ತಂಡದ ಗೆಲುವಿನಲ್ಲಿ ಮಹತ್ವದ ಪಾಲು ನೀಡುತ್ತಿರುವ ಜೊತೆಗೆ ಕಪ್ತಾನನಾಗಿ ತನ್ನ ದಾಖಲೆಯನ್ನೂ ಉತ್ತಮಗೊಳಿಸುತ್ತಿದ್ದಾರೆ. ರವಿವಾರ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಇನಿಂಗ್ಸ್ ಮತ್ತು 137 ರನ್‌ಗಳಿಂದ ಭಾರತ ಮಣಿಸಿತ್ತು. ಇದು ಭಾರತದಲ್ಲಿ ಟೀಮ್ ಇಂಡಿಯಾ ದಾಖಲಿಸಿದ 11ನೇ ನೇರ ಸರಣಿ ಗೆಲುವಾಗಿದೆ. ಜೊತೆಗೆ ಈ ಪಂದ್ಯದ ಮೂಲಕ ಕೊಹ್ಲಿ ನಾಯಕನಾಗಿ 50 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು ಅತೀಹೆಚ್ಚು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ನಾಯಕರ ಪಟ್ಟಿಯಲ್ಲಿ ಆಸ್ಟ್ರೇಲಿಯದ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ನಂತರ ಮೂರನೇ ಸ್ಥಾನದಲ್ಲಿದ್ದಾರೆ. ಪುಣೆಯಲ್ಲಿ ನಡೆದ ಪಂದ್ಯ ಕೊಹ್ಲಿ ನಾಯಕನಾಗಿ 50ನೇ ಪಂದ್ಯವಾಗಿದ್ದು ಗೆಲುವು ಸಾಧಿಸಿದ 30ನೇ ಪಂದ್ಯವಾಗಿತ್ತು. ಸ್ಟೀವ್ ವಾ ನಾಯಕನಾಗಿ 50 ಪಂದ್ಯಗಳಲ್ಲಿ 37 ಗೆಲುವು ದಾಖಲಿಸಿದ್ದರೆ, ರಿಕಿ ಪಾಂಟಿಂಗ್ ನಾಯಕನಾಗಿ 50 ಪಂದ್ಯಗಳಲ್ಲಿ 35 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರು. ಸದ್ಯ ಕೊಹ್ಲಿ ನಾಯಕತ್ವದಲ್ಲಿ ವಿದೇಶಗಳಲ್ಲಿ ಭಾರತ ಆಡಿರುವ 27 ಟೆಸ್ಟ್‌ಗಳಲ್ಲಿ 13ರಲ್ಲಿ ಜಯ ಗಳಿಸಿದ್ದರೆ ಭಾರತದಲ್ಲಿ ಆಡಿರುವ 23 ಪಂದ್ಯಗಳಲ್ಲಿ 17ರಲ್ಲಿ ಅತಿಥೇಯ ತಂಡ ಗೆಲುವು ಸಾಧಿಸಿದೆ. ನಾಯಕನಾಗಿ ಕೊಹ್ಲಿ ಟೆಸ್ಟ್ ಪಂದ್ಯದಲ್ಲಿ ಸದ್ಯ ಶೇ.60ರ ಗೆಲುವಿನ ಸರಾಸರಿ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News