ಬ್ಯಾಂಕ್, ಜ್ಯುವೆಲ್ಲರಿಗಳಿಂದ ದೋಚಿದ್ದ 12 ಕೆಜಿ ಚಿನ್ನ ನೆಲದಲ್ಲಿ ಹೂತಿಟ್ಟಿದ್ದ ಕಳ್ಳ !

Update: 2019-10-15 16:05 GMT

ಬೆಂಗಳೂರು, ಅ.15: ಬ್ಯಾಂಕ್ ಮತ್ತು ಚಿನ್ನಾಭರಣ ಮಳಿಗೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡಿದ್ದ ಆರೋಪಿಯೊರ್ವ, ಬರೋಬ್ಬರಿ 12 ಕೆಜಿ ಚಿನ್ನಾಭರಣಗಳನ್ನು ಭೂಮಿಯೊಳಗೆ ಹೂತಿಟ್ಟಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಕಳವು ಪ್ರಕರಣಗಳ ಪ್ರಮುಖ ರೂವಾರಿ ತಮಿಳುನಾಡು ಮೂಲದ ತಿರುವಂಬೂರ್‌ನ ಮುರುಗನ್(45) ಎಂಬಾತನನ್ನು ಬಂಧಿಸುವಲ್ಲಿ ಬೊಮ್ಮನಹಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ತಮಿಳುನಾಡಿನ ತಿರುಚನಾಪಲ್ಲಿ ನಿವಾಸಿಯಾಗಿರುವ ಆರೋಪಿ, ಬಾಲ ಮುರುಗನ್, ಶಿವಕುಮಾರ್ ಹಾಗೂ ಶಿವ ಇನ್ನಿತರ ಹೆಸರುಗಳಲ್ಲಿ ಕಳವು ಕೃತ್ಯ ನಡೆಸುತ್ತಿದ್ದ. ವಿವಿಧ ರಾಜ್ಯಗಳಲ್ಲಿ ನಡೆದ ಮನೆ ಹಾಗೂ ಬ್ಯಾಂಕ್ ಕಳವು ಕೃತ್ಯಗಳಲ್ಲಿ ಈತ ಭಾಗಿಯಾಗಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಆರೋಪಿಯು ಎಚ್‌ಎಸ್‌ಆರ್ ಲೇಔಟ್, ಬೊಮ್ಮನಹಳ್ಳಿ ಸೇರಿ ಹಲವು ಕಡೆ ಚಿನ್ನಾಭರಣಗಳು ಹಾಗೂ ತಿರುಚ್ಚಿ ಲಲಿತಾ ಜ್ಯುವೆಲರ್ಸ್‌, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಕಳವು ಮಾಡಿದ್ದ ಆಭರಣಗಳನ್ನು ತಿರುಚ್ಚಿ ನದಿ ದಡದ ಭೂಮಿಯೊಳಗೆ ಹೂತಿಟ್ಟಿದ್ದು, ಅವುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದರು.

ಬೊಮ್ಮನಹಳ್ಳಿಯಲ್ಲಿ ನಡೆದಿದ್ದ ಕಳವು ಕೃತ್ಯವನ್ನು ದಾಖಲಿಸಿಕೊಂಡಿದ್ದ ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ನೇತೃತ್ವದ ವಿಶೇಷ ತಂಡ ಖಚಿತ ಮಾಹಿತಿ ಮೇರೆಗೆ ಮುರುಗನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವು ಕನ್ನಗಳವು ಕೃತ್ಯಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಗೃಹ ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News