ಭಾರತದಲ್ಲಿ ಟಿ-20 ಟೂರ್ನಿ ಆಡಲು ಸಚಿನ್ ತೆಂಡುಲ್ಕರ್, ಲಾರಾ ಸಿದ್ಧತೆ

Update: 2019-10-15 18:31 GMT

ಮುಂಬೈ, ಅ.15: ಬ್ಯಾಟಿಂಗ್ ದಿಗ್ಗಜರಾದ ಸಚಿನ್ ತೆಂಡುಲ್ಕರ್ ಹಾಗೂ ಬ್ರಿಯಾನ್ ಲಾರಾ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ರಸ್ತೆ ಸುರಕ್ಷಾ ವಿಶ್ವ ಸರಣಿಯಲ್ಲಿ ಆಡುವ ಮೂಲಕ ಕ್ರಿಕೆಟ್ ಮೈದಾನಕ್ಕೆ ವಾಪಸಾಗಲಿದ್ದಾರೆ.

   ವರ್ಲ್ಡ್ ಸಿರೀಸ್ ವಾರ್ಷಿಕ ಟ್ವೆಂಟಿ-20 ಟೂರ್ನಮೆಂಟ್ ಆಗಿದ್ದು, ಐದು ರಾಷ್ಟ್ರಗಳಾದ-ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್‌ಇಂಡೀಸ್ ಹಾಗೂ ಭಾರತದ ನಿವೃತ್ತ ಕ್ರಿಕೆಟಿಗರು ಇದರಲ್ಲಿ ಆಡಲಿದ್ದಾರೆ. ಭಾರತದ ತೆಂಡುಲ್ಕರ್ ಹಾಗೂ ವೆಸ್ಟ್ ಇಂಡೀಸ್‌ನ ಲಾರಾ ಜೊತೆ ಮಾಜಿ ಆಟಗಾರರಾದ ಭಾರತದ ವೀರೇಂದ್ರ ಸೆಹ್ವಾಗ್, ಆಸ್ಟ್ರೇಲಿಯದ ಬ್ರೆಟ್ ಲೀ, ಶ್ರೀಲಂಕಾದ ತಿಲಕರತ್ನೆ ದಿಲ್ಶನ್ ಹಾಗೂ ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಕೈಜೋಡಿಸಲಿದ್ದಾರೆ. ಟೂರ್ನಮೆಂಟ್ ಭಾರತದಾದ್ಯಂತ ಫೆ.2 ರಿಂದ 16ರ ತನಕ ನಡೆಯಲಿದೆ. 46ರ ಹರೆಯದ ತೆಂಡುಲ್ಕರ್ ಟೆಸ್ಟ್ ಹಾಗೂ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವದ ಅಗ್ರಮಾನ್ಯ ರನ್ ಸ್ಕೋರರ್ ಆಗಿದ್ದಾರೆ. 2013ರಲ್ಲಿ ಕೊನೆಗೊಂಡ ತನ್ನ 24 ವರ್ಷಗಳ ವೃತ್ತಿಬದುಕಿನಲ್ಲಿ 34,000ಕ್ಕೂ ಅಧಿಕ ರನ್ ಹಾಗೂ 100 ಶತಕಗಳನ್ನು ಸಿಡಿಸಿದ್ದಾರೆ.

ತೆಂಡುಲ್ಕರ್ 2008ರಲ್ಲಿ ಟೆಸ್ಟ್‌ನಲ್ಲಿ ಗರಿಷ್ಠ ರನ್ ಗಳಿಸಿದ್ದ ಲಾರಾ ದಾಖಲೆಯನ್ನು ಮುರಿದಿದ್ದರು. ವಿಂಡೀಸ್‌ನ ಎಡಗೈ ಬ್ಯಾಟ್ಸ್ ಮನ್ ಲಾರಾ 2007ರಲ್ಲಿ ನಿವೃತ್ತಿಯಾಗುವ ಮೊದಲು ಟೆಸ್ಟ್ ಕ್ರಿಕೆಟ್‌ನಲ್ಲಿ 11,953 ರನ್ ಗಳಿಸಿದ್ದರು. ಲಾರಾ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ. 2004ರಲ್ಲಿ ಆ್ಯಂಟಿಗುವಾದಲ್ಲಿ ಇಂಗ್ಲೆಂಡ್ ವಿರುದ್ಧ ಲಾರಾ ಔಟಾಗದೆ 400 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News