ಭಾರತವನ್ನು ಆತ್ಮವಿಮರ್ಶೆಗೆ ಒಡ್ಡುವ ನೊಬೆಲ್ ಗೌರವ

Update: 2019-10-16 07:42 GMT

ಭಾರತದ ಅರ್ಥವ್ಯವಸ್ಥೆ ದಿಕ್ಕು ದಿಸೆಯಿಲ್ಲದೆ ಚಲಿಸುತ್ತಿರುವ ಹೊತ್ತಿನಲ್ಲಿ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಅವರಿಗೆ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಬಂದಿದೆ. ಭಾರತ ಈ ಗೌರವವನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಭಾರತವನ್ನು ಆಳುತ್ತಿರುವ ವ್ಯವಸ್ಥೆಗೆ ಬ್ಯಾನರ್ಜಿ ಪ್ರತಿಪಾದಿಸಿದ ಅರ್ಥಶಾಸ್ತ್ರದ ಕುರಿತಂತೆ ಯಾವ ಗೌರವವೂ ಇಲ್ಲ. ಮುಖ್ಯವಾಗಿ, ಭಾರತದ ಆರ್ಥಿಕತೆ ಹಿರಿಯ ಅರ್ಥಶಾಸ್ತ್ರಜ್ಞರ ಮಾರ್ಗದರ್ಶನದ ಬದಲಿಗೆ, ಕಾರ್ಪೊರೇಟ್ ಪ್ರಮುಖರ ನಿರ್ದೇಶನದಂತೆ ಚಲಿಸುತ್ತಿದೆ. ಈ ದೇಶದ ಆರ್ಥಿಕತೆಯ ಕುರಿತಂತೆ ಕಳವಳ ವ್ಯಕ್ತಪಡಿಸುತ್ತಿರುವ ಗಣ್ಯರು ದೇಶದ್ರೋಹಿಗಳಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಒಂದು ರೀತಿಯಲ್ಲಿ ಬ್ಯಾನರ್ಜಿಯೂ ಸರಕಾರದ ಪಾಲಿಗೆ ‘ದೇಶದ್ರೋಹಿ’ಯೇ ಆಗಿದ್ದಾರೆ. ಯಾಕೆಂದರೆ, ನೋಟು ನಿಷೇಧದಿಂದ ಹಿಡಿದು ಆ ಬಳಿಕದ ಭಾರತದ ಆರ್ಥಿಕ ನಡೆಗಳನ್ನು ಬ್ಯಾನರ್ಜಿ ಪ್ರತಿ ಹಂತದಲ್ಲೂ ಟೀಕಿಸುತ್ತಿದ್ದರು. ಆತಂಕ ವ್ಯಕ್ತಪಡಿಸುತ್ತಿದ್ದರು. ಬಹುಶಃ ಈ ಕಾರಣಕ್ಕಾಗಿಯೇ ಇರಬೇಕು, ಬ್ಯಾನರ್ಜಿಗೆ ನೊಬೆಲ್ ಬಹುಮಾನ ಪ್ರಕಟವಾದ ಬಳಿಕ ತೀರಾ ತಡವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಶುಭಾಶಯಗಳನ್ನು ತಿಳಿಸಿದರು. ಆದರೆ ಅವರ ಶುಭಾಶಯಗಳಲ್ಲಿ ವಿಶೇಷ ಸಂಭ್ರಮವೇನೂ ಇದ್ದಿರಲಿಲ್ಲ. ಅಭಿಜಿತ್ ಬ್ಯಾನರ್ಜಿ, ಅವರ ಪತ್ನಿ ಎಸ್ತರ್ ಡಫ್ಲೊ ಹಾಗೂ ಇನ್ನೋರ್ವ ಅರ್ಥಶಾಸ್ತ್ರಜ್ಞ ಮೈಕೆಲ್ ಕ್ರೆಮೆರ್ ಅವರಿಗೆ ಈ ವರ್ಷದ ನೊಬೆಲ್ ಪುರಸ್ಕಾರವನ್ನು ಘೋಷಿಸಿರುವುದು, ವಿಶ್ವದಾದ್ಯಂತ ಬಡತನದ ವಿರುದ್ಧ ನಡೆಯುತ್ತಿರುವ ಹೋರಾಟಗಳಿಗೆ ಸಂದ ಮಾನ್ಯತೆಯಾಗಿದೆ. ಶಿಕ್ಷಣ ಹಾಗೂ ಆರೋಗ್ಯಪಾಲನೆ ಕ್ಷೇತ್ರದಲ್ಲಿ ನೂತನ ದೃಷ್ಟಿಕೋನಗಳ ಆವಿಷ್ಕಾರ ಹಾಗೂ ಬಡತನ ವಿರುದ್ಧ ಹೋರಾಟದಲ್ಲಿ ಪ್ರಾಯೋಗಿಕ ವಿಧಾನಗಳನ್ನು ಮಂಡಿಸಿದ್ದಕ್ಕಾಗಿ ಈ ಮೂವರು ಅರ್ಥಶಾಸ್ತ್ರಜ್ಞರು ವಿಶ್ವದ ಪರಮೋನ್ನತ ಪ್ರಶಸ್ತಿಯನ್ನುತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಭಾರತದಲ್ಲಿ ಬಡತನದ ನಿವಾರಣೆಗೆ ಹಲವಾರು ಸರಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದರೂ ಅವೆಲ್ಲವೂ ತಮ್ಮ ಉದ್ದೇಶಿತ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ಯಾಕೆಂದರೆ ಅಂತಹ ಯೋಜನೆಗಳನ್ನು ವೈಜ್ಞಾನಿಕವಾಗಿ ಅನುಷ್ಠಾನಗೊಳಿಸುವಲ್ಲಿ ಸರಕಾರಗಳು ಎಡವಿರುವುದರಲ್ಲಿ ಎರಡು ಮಾತಿಲ್ಲ ಮತ್ತು ಆ ಕುರಿತಂತೆ ನಮ್ಮ ಸರಕಾರ ಆತ್ಮವಿಮರ್ಶೆ ಮಾಡಲು ಯಾವತ್ತೂ ಮುಂದಾಗಿಲ್ಲ. ಬಹುಶಃ ಬ್ಯಾನರ್ಜಿಗೆ ಸಂದ ನೊಬೆಲ್, ಅಂತಹದೊಂದು ಆತ್ಮವಿಮರ್ಶೆಗೆ ಭಾರತವನ್ನು ಒತ್ತಾಯಿಸುತ್ತಿದೆ. ಸರಕಾರಗಳು ಬಡತನ ನಿವಾರಣೆಗೆ ಯೋಜನೆಗಳನ್ನು ಪ್ರಕಟಿಸಿದರೂ, ಅವು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿವೆಯೆಂಬುದನ್ನು ಸಮರ್ಪಕವಾಗಿ ಗ್ರಹಿಸುವುದು ಅಷ್ಟೇ ಮುಖ್ಯವಾಗಿದೆ. ಶಿಶುಮರಣ ಪ್ರಮಾಣವನ್ನು ಕಡಿಮೆಗೊಳಿಸಲು ಉಚಿತ ಲಸಿಕೆ ಅಭಿಯಾನವನ್ನು ಘೋಷಿಸುವುದಷ್ಟೇ ಸಾಲದು. ಬಡತಾಯಂದಿರು ತಮ್ಮ ಮಕ್ಕಳನ್ನು ಲಸಿಕೆ ಕೇಂದ್ರಕ್ಕೆ ಕರೆತರಲು ಮೈಲುಗಟ್ಟಲೆ ನಡೆದುಕೊಂಡು ಬರಲು ಅವರಿಗೆ ಪೌಷ್ಟಿಕ ಆಹಾರ ಸೇವನೆಯೂ ಅಷ್ಟೇ ಮುಖ್ಯವಾಗುತ್ತದೆ. ಆದುದರಿಂದ ಅವರಿಗೆ ಬೇಳೆಕಾಳುಗಳು ಸೇರಿದಂತೆ ಪೌಷ್ಟಿಕ ಆಹಾರವನ್ನು ಒದಗಿಸುವ ಬಗ್ಗೆಯೂ ಸರಕಾರಗಳು ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ.ಇಂತಹ ದೃಷ್ಟಿಕೋನಗಳನ್ನು ಅಭಿವೃದ್ಧಿಪಡಿಸಲು ಅಭಿಜಿತ್ ಹಾಗೂ ಡಫ್ಲೊ ಅವರು ಮ್ಯಾಸಚ್ಯೂಸೆಚ್ಸ್ ತಂತ್ರಜ್ಞಾನ ಸಂಸ್ಥೆಯಲ್ಲಿ (ಎಂಐಟಿ) ಅಬ್ದುಲ್ ಲತೀಫ್ ಜಮೀಲ್ ಸ್ಮಾರಕ ‘ಬಡತನ ವಿರುದ್ಧ ಕ್ರಿಯಾ ಪ್ರಯೋಗಶಾಲೆ’ ಎಂಬ ಚಿಂತನಾಸಂಸ್ಥೆಯನ್ನು ಸ್ಥಾಪಿಸಿದರು. ಅಭಿಜಿತ್ ದಂಪತಿ ಹಾಗೂ ಅವರ ಸಹದ್ಯೋಗಿಗಳು, ವಿಶೇಷವಾಗಿ ಭಾರತದಲ್ಲಿ ಈ ನಿಟ್ಟಿನಲ್ಲಿ ಹಲವಾರು ಅಧ್ಯಯನಗಳನ್ನು ನಡೆಸಿದರು. ಇದೀಗ ಅವರಿಗೆ ನೊಬೆಲ್ ಪುರಸ್ಕಾರ ಲಭಿಸಿರುವುದು ಬಡತನದ ವಿರುದ್ಧ ಹೋರಾಟದಲ್ಲಿ ಹೊಸ ಆಶಾವಾದವನ್ನು ಮೂಡಿಸಿದೆ.

ಕಳೆದ ಎರಡು ದಶಕಗಳಲ್ಲಿ ಈ ನೊಬೆಲ್ ಪುರಸ್ಕೃತ ದಂಪತಿ, ಬಡವರ ಬದುಕಿನ ಬವಣೆಗಳನ್ನು ಅರಿತುಕೊಳ್ಳಲು ಅಪಾರವಾಗಿ ಶ್ರಮಿಸಿದ್ದರು. ಬಡತನದ ಬಗ್ಗೆ ಆಳುವ ಮಂದಿಗೆ ಇರುವ ಅಸಮರ್ಪಕವಾದ ತಿಳುವಳಿಕೆಯು, ಆ ಪಿಡುಗಿನ ವಿರುದ್ಧ ಹೋರಾಟಕ್ಕೆ ಅತಿ ದೊಡ್ಡ ಅಡ್ಡಗಾಲಾಗಿದೆ ಎಂಬುದನ್ನು ಅವರು ಪುರಾವೆಗಳೊಂದಿಗೆ ರೂಪಿಸಿದ್ದರು.ಅಭಿಜಿತ್ ಹಾಗೂ ಡಫ್ಲೊ ದಂಪತಿ, ಹಲವಾರು ವರ್ಷಗಳ ಕಾಲ ಭಾರತ ಹಾಗೂ ಆಫ್ರಿಕಾದಲ್ಲಿ ಬಡತನದ ಕುರಿತು ಅವಿರತವಾದ ಕ್ಷೇತ್ರ ಕಾರ್ಯನಿರ್ವಹಿಸಿದರು. ಬಡವರು ಏನನ್ನು ಖರೀದಿಸುತ್ತಾರೆ, ಅವರ ಮಕ್ಕಳ ಆರೋಗ್ಯದ ಬಗ್ಗೆ ಯಾವ ರೀತಿ ಕಾಳಜಿ ವಹಿಸುತ್ತಾರೆ, ಅವರ ಮಕ್ಕಳು ಶಾಲೆಗೆ ಹೋದರೂ, ಹೆಚ್ಚು ಕಲಿಯಲು ಅವರಿಗೆ ಯಾಕೆ ಸಾಧ್ಯವಾಗುವುದಿಲ್ಲ ಎಂಬಿತ್ಯಾದಿ ವಿಷಯಗಳ ಬಗ್ಗೆ ಈ ದಂಪತಿ ಕೂಲಂಕಷ ಅಧ್ಯಯನ ನಡೆಸಿದ್ದರು. ಅಭಿಜಿತ್ ಹಾಗೂ ಎಸ್ತರ್ ಡಫ್ಲೊ ಅವರ ಸಂಶೋಧನೆಯು ಸರಕಾರಗಳು ಹಾಗೂ ಅಂತರ್‌ರಾಷ್ಟ್ರೀಯ ಸಂಸ್ಥೆಗಳು ತಮ್ಮ ಆಹಾರ ನೀತಿಯ ಬಗ್ಗೆ ಸಂಪೂರ್ಣವಾಗಿ ಮರುಚಿಂತಿಸುವ ಅಗತ್ಯವನ್ನು ಒತ್ತಿ ಹೇಳಿವೆ. ಬಡವರಿಗೆ ಅಧಿಕ ಪ್ರಮಾಣದಲ್ಲಿ ಆಹಾರಧಾನ್ಯಗಳನ್ನು ಒದಗಿಸಿದ ಮಾತ್ರಕ್ಕೆ ಆಹಾರಭದ್ರತಾ ಕಾರ್ಯಕ್ರಮ ಯಶಸ್ವಿಯೆನಿಸಲಾರದು. ಯಾಕೆಂದರೆ ಬಡವರು ಎದುರಿಸುತ್ತಿರುವ ಮುಖ್ಯ ಸಮಸ್ಯೆಯು ಆಹಾರದ ಪ್ರಮಾಣಕ್ಕೆ ಸಂಬಂಧಿಸಿದ್ದಲ್ಲ ಬದಲಿಗೆ ಅವರಿಗೆ ಎಷ್ಟು ಪ್ರಮಾಣದಲ್ಲಿ ಪೌಷ್ಟಿಕ ಆಹಾರ ಲಭ್ಯವಾಗುತ್ತಿದೆ ಎಂಬುದಾಗಿದೆ ಎಂದು ಈ ದಂಪತಿ ಪ್ರತಿಪಾದಿಸಿದ್ದಾರೆ.

ಬಡತನವನ್ನು ಒಮ್ಮಿಂದೊಮ್ಮೆಗೆ ತೊಲಗಿಸಲು ಯಾವುದೇ ಜಾದೂ ಇಲ್ಲ. ಆದರೆ ಸಮರ್ಪಕ ಯೋಜನೆಗಳ ಸೂಕ್ತವಾದ ಅನುಷ್ಠಾನದಿಂದ ಬಡವರ ಬದುಕನ್ನು ಸುಧಾರಣೆಗೊಳಿಸಲು ಸಾಧ್ಯವಿದೆಯೆಂದು ಅವರು ಪ್ರತಿಪಾದಿಸುತ್ತಾರೆ. ಬಡ ರಾಷ್ಟ್ರಗಳು, ಅವು ಬಡತನದಿಂದಪೀಡಿತವಾಗಿರುವುದರಿಂದ ಅಥವಾ ಅತ್ಯಂತ ದುರದೃಷ್ಟಕರ ಇತಿಹಾಸ ಹೊಂದಿರುವುದರಿಂದ ಅವು ವಿಫಲವಾಗಿವೆಯೆಂದು ಭಾವಿಸಕೂಡದು. ಆದರೆ ಅವು ಬಡತನದ ವಿರುದ್ಧ ಹೋರಾಡಲು ಬೇಕಾದ ಇಚ್ಛಾಶಕ್ತಿ ಹಾಗೂ ಸಿದ್ಧಾಂತಗಳ ಕೊರತೆಯನ್ನು ಎದುರಿಸುತ್ತಿವೆಯೆಂದು ಪ್ರತಿಪಾದಿಸಿದ್ದಾರೆ.ಬಡತನದ ವಿರುದ್ಧ ಹೋರಾಟದಲ್ಲಿ ಜಯಗಳಿಸಲು ಯಾವುದೇ ದೇಶಕ್ಕೂ ಸಾಧ್ಯವಿದೆ. ಆದರೆ ಅದಕ್ಕೆ ವಿವೇಚನೆ, ತಾಳ್ಮೆ ಹಾಗೂ ಜಾಗರೂಕತೆಯಿಂದ ಕೂಡಿದ ಚಿಂತನೆ ಹಾಗೂ ಹಿಂದಿನ ಪ್ರಮಾದಗಳಿಂದ ಪಾಠ ಕಲಿತುಕೊಳ್ಳುವ ಇಚಾಶಕ್ತಿಯ ಅಗತ್ಯವಿದೆಯೆಂದು ಅಭಿಜಿತ್‌ರ ತರ್ಕವಾಗಿದೆ.

ಅಭಿಜಿತ್ ಅವರ ಆರ್ಥಿಕ ಚಿಂತನೆಗಳನ್ನು ಗರಿಷ್ಠ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಮೂಲಕ, ಸಿಕ್ಕಿದ ನೊಬೆಲ್ ಗೌರವವನ್ನು ಭಾರತ ಅರ್ಥಪೂರ್ಣಗೊಳಿಸಬೇಕಾಗಿದೆ. ಇದುವೇ ಬ್ಯಾನರ್ಜಿ ಅವರ ಸಾಧನೆಗಾಗಿ ಅರ್ಪಿಸುವ ಬಹುದೊಡ್ಡ ಅಭಿನಂದನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News