ಈ ನಷ್ಟವನ್ನು ತುಂಬಿಸಿಕೊಡುವವರು ಯಾರು?

Update: 2019-10-16 09:25 GMT

370ನೇ ವಿಧಿ ಇರುವಾಗಲೂ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿಯೇ ಇತ್ತು ಹಾಗೂ 370ನೇ ವಿಧಿ ರದ್ದಾದ ಮೇಲೂ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿಯೇ ಇದೆ. ನಮ್ಮ ದೇಶದ ಅಖಂಡತೆ ಕಾಪಾಡಲು ನಮ್ಮ 13 ಲಕ್ಷ ವೀರ ಸೈನಿಕರು ಸಮರ್ಥರಾಗಿದ್ದಾರೆ, ಅದಕ್ಕೆ ನಾಟಕಕಾರ ರಾಜಕೀಯ ನೇತಾರರು ಬೇಕಿಲ್ಲ. ಅರ್ಥಶಾಸ್ತ್ರದ ಸ್ವಲ್ಪವೂ ಜ್ಞಾನವಿಲ್ಲದ ವ್ಯಕ್ತಿಗಳು ಕೇವಲ ಚುನಾವಣೆಗಳನ್ನು ಗೆಲ್ಲುವ ದೃಷ್ಟಿಯಿಂದ ಹಿಂದೂ ಮುಸ್ಲಿಮರೊಳಗೆ ಭೇದ ಕಲ್ಪಿಸಲು 370ನೇ ವಿಧಿ ರದ್ದತಿ ನೆಪದಲ್ಲಿ 75 ಲಕ್ಷ ಕಾಶ್ಮೀರಿಗಳ ಜೀವನ ದುರ್ಭರ ಮಾಡಿದ್ದಲ್ಲದೆ ಇತರ ರಾಜ್ಯಗಳ ಆರ್ಥಿಕತೆಗೂ ಮಾರಣಾಂತಿಕ ಪೆಟ್ಟು ಕೊಟ್ಟಿದ್ದಾರೆ.

ಯಾವುದೇ ರಾಜ್ಯದ ಆರ್ಥಿಕ ಚಟುವಟಿಕೆ ಕೇವಲ ಆಯಾ ರಾಜ್ಯದ ಜನರಿಗೆ ಸೀಮಿತವಾಗಿ ಇರುವುದಿಲ್ಲ. ಅದು ಸುತ್ತಲಿನ ಇತರ ರಾಜ್ಯಗಳ ಜನರ ಆರ್ಥಿಕ ಚಟುವಟಿಕೆಯೊಂದಿಗೂ ಬೆಸೆದುಕೊಂಡಿರುತ್ತದೆ. ಕಾಶ್ಮೀರದ ಎಪ್ಪತ್ತೈದು ಲಕ್ಷ ಜನರಿಗೆ ಬೇಕಾಗುವ ಗೋದಿ, ಅಕ್ಕಿ, ಬೇಳೆಕಾಳು, ಹಾಲು, ತರಕಾರಿ, ಅಡುಗೆ ಎಣ್ಣೆ ಇವು ಪೂರೈಕೆ ಆಗುತ್ತಿದ್ದದ್ದು ನೆರೆಯ ರಾಜ್ಯಗಳಾದ ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಿಂದ. ಈಗ ಒಮ್ಮೆಗೇ ಇಷ್ಟು ದೊಡ್ಡ ಸಂಖ್ಯೆಯ ಕಾಶ್ಮೀರಿ ಗ್ರಾಹಕರನ್ನು ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಉತ್ಪಾದಕರು ಕಳೆದು ಕೊಂಡಿರುವುದರಿಂದಾಗಿ ಪಂಜಾಬ್ ಮತ್ತು ಹಿಮಾಚಲದ ಆರ್ಥಿಕತೆಗೂ ಭಾರೀ ಧಕ್ಕೆಯಾಗಿದೆ. ಮೊದಲೇ ಭಾರತದಲ್ಲಿ ಆರ್ಥಿಕ ಹಿಂಜರಿತ ಭಯಂಕರವಾಗಿ ಎಲ್ಲಾ ಕ್ಷೇತ್ರಗಳನ್ನು ಬಾಧಿಸುತ್ತಿದೆ. ಈಗ 75 ಲಕ್ಷ ಕಾಶ್ಮೀರಿಗಳ ಎರಡು ತಿಂಗಳ ಅನರ್ಥಕಾರಿ ಗೃಹ ಬಂಧನದಿಂದಾಗಿ ಕಾಶ್ಮೀರದ ಸುತ್ತಲಿನ ಎಲ್ಲಾ ರಾಜ್ಯಗಳ ಆರ್ಥಿಕತೆ ಇನ್ನಷ್ಟು ಹದಗೆಟ್ಟಿದೆ. ಉದಾಹರಣೆಗೆ, ಒಂದು ವೇಳೆ ಬೆಂಗಳೂರಿನ 75 ಲಕ್ಷ ಜನರನ್ನು ಗೃಹ ಬಂಧನದಲ್ಲಿ ಇಟ್ಟು ಎಲ್ಲಾ ಅಂಗಡಿ ಹೋಟೆಲುಗಳನ್ನು ಬಂದ್ ಮಾಡಿದರೆ ಆಗ ಎನಾಗುತ್ತದೆ ಊಹಿಸಿ! ಬೆಂಗಳೂರಿನ ಐಟಿ ಕಂಪೆನಿಗಳಿಗೆ ಕಾಂಟ್ರ್ಯಾಕ್ಟ್ ಕೊಡುತ್ತಿದ್ದ ವಿದೇಶಿ ಕಂಪೆನಿಗಳು ಅಥವಾ ಬೇರೆ ರಾಜ್ಯದ ಕಂಪೆನಿಗಳು ತಮ್ಮ ವ್ಯವಹಾರವನ್ನು ಬೆಂಗಳೂರಿಂದ ಬೇರೆ ನಗರದಲ್ಲಿರುವ ಐಟಿ ಕಂಪೆನಿಗಳಿಗೆ ವರ್ಗಾಯಿಸುತ್ತವೆ ತಾನೇ. ಎರಡು ತಿಂಗಳ ನಂತರ ಬೆಂಗಳೂರಿನವರ ಗೃಹಬಂಧನ ಮುಗಿದರೂ ಆಗ ಬೆಂಗಳೂರಿನ ಎಲ್ಲಾ ಉದ್ಯಮ, ವ್ಯಾಪಾರಗಳು ನೀರಿಲ್ಲದೆ ಗಿಡದಂತೆ ಸತ್ತು ಹೋಗಿ ಇಲ್ಲಿಯ ಎಲ್ಲಾ ಕಂಪೆನಿಗಳನ್ನು ಮುಚ್ಚ ಬೇಕಾಗುತ್ತದೆ, ಇಲ್ಲಿಯ ಜನರು ನಿರುದ್ಯೋಗಿಗಳಾಗಿ ಕೊಳೆಯುತ್ತಾರೆ. ಹೀಗೆಯೇ ಇದೆ ಕಾಶ್ಮೀರದಲ್ಲಿನ ಎರಡು ತಿಂಗಳ ಗೃಹ ಬಂಧನದಿಂದ ಆಗಿರುವ ಪರಿಸ್ಥಿತಿ.

ಕಾಶ್ಮೀರದಲ್ಲಿ ಎರಡೂವರೆ ತಿಂಗಳುಗಳಿಂದ ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್‌ಗಳು ಬಂದ್ ಪರಿಸ್ಥಿತಿಯಲ್ಲಿ ಬಾಧಿತವಾಗಿರುವುದರಿಂದ ಅನೇಕ ಹಿರಿಯ ನಾಗರಿಕರಿಗೆ ತಮ್ಮ ನಿತ್ಯದ ಸಕ್ಕರೆ ಕಾಯಿಲೆ-ಬಿಪಿ ಔಷಧಿ, ಇನ್ಸುಲಿನ್, ಟಾನಿಕ್ ಸಿಗದೇ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ, ಸಮಯಕ್ಕೆ ಸರಿಯಾಗಿ ಡಾಕ್ಟರ್ ಸಿಗದೇ ಅನೇಕ ಹಿರಿಯ ನಾಗರಿಕರು ಮತ್ತು ಮಕ್ಕಳು ಇಹಲೋಕ ತ್ಯಜಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡುತ್ತಿವೆ.

 ಕಾಶ್ಮೀರದ ಪ್ರಮುಖ ಬೆಳೆ ಸೇಬು ಹಣ್ಣು, ಅಡುಗೆ ಕೇಸರಿ, ಮೆಕ್ಕೆ ಜೋಳ ಮತ್ತು ರಾಜ್ಮಾ ಅವರೇಕಾಳು. ಆದರೆ ಹಿಂದಿನ ಎರಡೂವರೆ ತಿಂಗಳುಗಳಿಂದ ಅಲ್ಲಿಯ ರೈತರಿಗೆ ಮನೆಯಿಂದ ಹೊರಗೆ ಹೋಗಲು ಪೊಲೀಸರು ಬಿಡದಿರುವುದರಿಂದ ಕೋಟ್ಯಂತರ ರೂಪಾಯಿಯ ಸೇಬು, ಮೆಕ್ಕೆ ಜೋಳ ಹಾಗೂ ಕೇಸರಿ ಬೆಳೆ ಹಾಳಾಗಿ ಹೋಗಿವೆ. ಜತೆಗೆ ಕಾಶ್ಮೀರದ ಜಗತ್ಪ್ರಸಿದ್ಧ ಉಣ್ಣೆ ಬಟ್ಟೆ ಮತ್ತು ಶಾಲು ಮಾಡುವ ಮಗ್ಗಗಳನ್ನು ನಡೆಸಲು ಸಾಧ್ಯವಾಗದ್ದರಿಂದ ಅಲ್ಲಿಯ ಟೆಕ್ಸ್‌ಟೈಲ್ ಉದ್ಯಮ ಸಹ ಸಂಪೂರ್ಣ ನೆಲ ಕಚ್ಚಿದೆ. ಕಾಶ್ಮೀರ ಕಣಿವೆಯ 75 ಲಕ್ಷ ಜನರಿಗೆ ಯಾವುದೇ ಉದ್ಯೋಗ ಮತ್ತು ಆದಾಯದ ಮೂಲ ಈಗ ಇಲ್ಲದ್ದರಿಂದಾಗಿ ಅಲ್ಲಿಯ ಜನರು ಅರೆಹೊಟ್ಟೆಯಲ್ಲಿ ಎರಡೂವರೇ ತಿಂಗಳಿಂದ ಜೀವಿಸುತ್ತಿದ್ದಾರೆ. ಇದು ನಮ್ಮ ಈಗಿನ ಪ್ರಜಾಪ್ರಭುತ್ವದ ಪರಿ. ಯಾವುದೇ ಕಂಪೆನಿಯ ಉತ್ಪನ್ನವನ್ನು 75 ಲಕ್ಷ ಕಾಶ್ಮೀರಿಗಳು ಎರಡು ತಿಂಗಳ ಕಾಲ ಸತತ ಖರೀದಿಸುವುದನ್ನು ನಿಲ್ಲಿಸಿದಾಗ ಈ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಗಳಿಗೆ ಆಗುವ ನಷ್ಟ ಎಷ್ಟೆಂದು ಊಹಿಸಿ. ಅದೇ ಪ್ರಕಾರ ಕಾಶ್ಮೀರದಲ್ಲಿ ಉತ್ಪನ್ನವಾಗುವ ವಸ್ತುಗಳು ಇತರ ರಾಜ್ಯಗಳ ಖರೀದಿದಾರರಿಗೆ ಎರಡು ತಿಂಗಳು ಮುಟ್ಟಲು ಸಾಧ್ಯವಾಗದಿದ್ದರೆ ಅದರಿಂದ ಕಾಶ್ಮೀರದ ಆರ್ಥಿಕ ಚಟುವಟಿಕೆಗೆ ಆಗುವ ನಷ್ಟ ಎಷ್ಟು ಹಾಗೂ ಇತರ ನೆರೆಯ ರಾಜ್ಯಗಳಿಗೆ ಆಗುವ ನಷ್ಟ ಎಷ್ಟು ಎಂದು ಲೆಕ್ಕ ಹಾಕಿ. ಉದಾಹರಣೆಗೆ ಕರ್ನಾಟಕದಲ್ಲಿ ಉತ್ಪನ್ನವಾಗುವ ಕೃಷಿ ಉತ್ಪನ್ನ, ಆಹಾರ ಮತ್ತು ಇತರ ವಸ್ತುಗಳು ನಮ್ಮ ನೆರೆಯ ಗೋವಾ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಕ್ಕೆ ನಿರ್ಯಾತ ಆಗದಿದ್ದರೆ ಅಥವಾ ಈ ನೆರೆರಾಜ್ಯದಲ್ಲಿಯ ಉತ್ಪನ್ನಗಳು ನಮ್ಮ ಕರ್ನಾಟಕಕ್ಕೆ ಆಮದು ಆಗದಿದ್ದರೆ ಆಗ ಕರ್ನಾಟಕಕ್ಕೆ ಆಗುವ ನಷ್ಟ ಎಷ್ಟೆಂದು ಅಂದಾಜು ಮಾಡಿ. ಕೇವಲ ಹಿಂದೂ-ಮುಸ್ಲಿಮ್-ಪಾಕಿಸ್ತಾನ-ಕಾಶ್ಮೀರ ಇವೇ ಶಬ್ದಗಳ ಸುತ್ತ ಗಿರಕಿ ಸುತ್ತಿ ತನ್ನ ಲಕ್ಷಾಂತರ ಐಟಿ ಸೆಲ್ ಏಜಂಟರ ಮೂಲಕ ಸುಳ್ಳು ಸುದ್ದಿ ಹಬ್ಬಿಸಿ ದೇಶದ ಮುಗ್ಧ ಜನರನ್ನು ಭಾವನಾತ್ಮಕವಾಗಿ ಮರುಳು ಮಾಡಿ ಚುನಾವಣೆಯಲ್ಲಿ ವೋಟು ಪಡೆಯುವ ತಂತ್ರವನ್ನು ಯಾವಾಗಲೂ ಹೆಣೆಯುತ್ತಾ ಇರುವ ರಾಜಕಾರಣಿಗಳು ಜನರ ನೈಜ ಸಂಕಷ್ಟ ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದಿರಲು ಸಾಧ್ಯವೇ ಇಲ್ಲ. ದೇಶದ ಆರ್ಥಿಕ ಹಿಂಜರಿತದ ಬಗ್ಗೆ ಮಾತನಾಡುವವರನ್ನೆಲ್ಲಾ ದೇಶದ್ರೋಹಿ ಎಂದು ಕರೆದು ಬಾಯಿ ಮುಚ್ಚಿಸಿದ ಮಾತ್ರಕ್ಕೆ ನೈಜ ಆರ್ಥಿಕ ಸಮಸ್ಯೆ ಪರಿಹಾರ ಆಗಲು ಎಂದಾದರೂ ಸಾಧ್ಯವೇ?

ಚೀನಾದವರು ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಜಗತ್ತಿನ ಉಳಿದವರಿಗಿಂತ ತಾವು ಹೇಗೆ ಸದಾ ಮುಂದಿರಬೇಕು ಎಂದು ಪ್ರತಿದಿನ ಆಲೋಚಿಸುತ್ತಿದ್ದರೆ ನಾವು ಭಾರತೀಯರು ಮಾತ್ರ ಅದರ ವಿರುದ್ಧ ದಿಕ್ಕಿನಿಂದ ಸಾಗಿ, ನಮ್ಮನಮ್ಮೊಳಗೆ ಒಡಕನ್ನುಂಟು ಮಾಡಿಕೊಂಡು ದೇಶವನ್ನು ದುರ್ಗತಿಗೆ ತಳ್ಳುತ್ತಿದ್ದೇವೆ. ಈ ಸ್ಥಿತಿಯಿಂದ ನಮಗೆ ಎಚ್ಚರವಾಗುವುದು ಎಂದು?

Writer - ಹರೀಶ್ ಎಂ. ರಾವ್, ಉಡುಪಿ

contributor

Editor - ಹರೀಶ್ ಎಂ. ರಾವ್, ಉಡುಪಿ

contributor

Similar News