ತೀವ್ರ ಒತ್ತಡಕ್ಕೆ 24 ಗಂಟೆಗಳಲ್ಲಿ ಪಿಎಂಸಿ ಬ್ಯಾಂಕ್‌ನ ಮೂವರು ಠೇವಣಿದಾರರು ಮೃತ್ಯು

Update: 2019-10-16 06:29 GMT
ಸಂಜಯ್ ಗುಲಾಟಿ,ಫಟ್ಟೊಮಲ್ ಪಂಜಾಬಿ.

ಹೊಸದಿಲ್ಲಿ, ಅ.16: ವಿವಿಧ ರೀತಿಯ ಅಕ್ರಮ ಎಸೆಗಿರುವ ಪಂಜಾಬ್ ಹಾಗೂ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್(ಪಿಎಂಸಿ)ನ ವಿರುದ್ಧ ಮೂರು ವಾರಗಳ ಹಿಂದೆ ಆರ್‌ಬಿಐ ಹಣ ಹಿಂಪಡೆಯಲು ನಿರ್ಬಂಧ ಹೇರಿದ ಬಳಿಕ ಮುಂಬೈನಲ್ಲಿ 24 ಗಂಟೆಯೊಳಗೆ ಪಿಎಂಸಿ ಬ್ಯಾಂಕ್‌ನಲ್ಲಿ ಹಣವಿಟ್ಟಿದ್ದ ಮೂವರು ಗ್ರಾಹಕರು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.

ಇಬ್ಬರು ಬ್ಯಾಂಕ್ ಗ್ರಾಹಕರು ತೀವ್ರ ಒತ್ತಡಕ್ಕೆ ಒಳಗಾಗಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಅವರ ಕುಟುಂಬಿಕರು ಹಾಗೂ ಸ್ನೇಹಿತರು ತಿಳಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ 39 ವಯಸ್ಸಿನ ಇನ್ನೊಬ್ಬ ಬ್ಯಾಂಕ್ ಗ್ರಾಹಕ ತೀವ್ರ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೆಟ್ ಏರ್‌ವೇಸ್‌ನ ಮಾಜಿ ಹಿರಿಯ ಟೆಕ್ನಿಶಿಯನ್ ಸಂಜಯ್ ಗುಲಾಟಿ(51 ವರ್ಷ)ಸೋಮವಾರ ರಾತ್ರಿ ಊಟ ಮಾಡಿ ಮಲಗಿದ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದರು. 59 ವಯಸ್ಸಿನ ಫಟ್ಟೊಮಲ್ ಪಂಜಾಬಿ ಮುಲುಂಡ್‌ನ ಸಿಂಧಿ ಕಾಲನಿಯಲ್ಲಿ ತನ್ನ ಎಲೆಕ್ಟ್ರಾನಿಕ್ಸ್ ಅಂಗಡಿಯೊಳಗೆ ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಕಳೆದ ವರ್ಷ ಅಮೆರಿಕದಿಂದ ಮುಂಬೈಗೆ ಬಂದಿದ್ದ ಡಾ.ಯೋಗಿತಾ ಬಿಜ್ಲಾನಿ ಮಂಗಳವಾರ ಸಂಜೆ ವಿಪರೀತ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಲಾಟಿ ಬ್ಯಾಂಕ್ ವಿರುದ್ಧ ಪ್ರತಿಭಟನೆ ರ್ಯಾಲಿಯಲ್ಲಿ ಭಾಗವಹಿಸಿದ್ದು, ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಅಗಲಿದ್ದಾರೆ. ಪಂಜಾಬಿ ಅವರು ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದು, ಅವರ ಪತ್ನಿ ಹಾಗೂ ಅಳಿಯ ಕೆಲವೇ ತಿಂಗಳ ಹಿಂದೆ ಮೃತಪಟ್ಟಿದ್ದರು. ಡಾ.ಬಿಜ್ಲಾನಿ ತನ್ನ ಹೆತ್ತವರು ಹಾಗೂ ಒಂದು ವರ್ಷದ ಪುತ್ರನೊಂದಿಗೆ ಅಂಧೇರಿಯಲ್ಲಿ ವಾಸವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News