BREAKING NEWS ಅಯೋಧ್ಯೆ ಪ್ರಕರಣ: 40 ದಿನಗಳ ವಾದವಿವಾದಗಳ ಬಳಿಕ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

Update: 2019-10-16 15:30 GMT

ಹೊಸದಿಲ್ಲಿ,ಅ.16: ದಶಕಗಳಷ್ಟು ಹಳೆಯದಾದ,ಅಯೋಧ್ಯೆಯಲ್ಲಿನ ಮಂದಿರ-ಮಸೀದಿ ವಿವಾದದಲ್ಲಿ 40 ದಿನಗಳ ಕಾಲ ನಡೆದ ವಿಚಾರಣೆ ಇಂದು ಮುಕ್ತಾಯಗೊಂಡಿದ್ದು,ಸರ್ವೋಚ್ಚ ನ್ಯಾಯಾಲಯವು ಪ್ರಕರಣದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿದೆ.

ವಿಚಾರಣೆಯನ್ನು ನಡೆಸಿದ ಐವರು ನ್ಯಾಯಾಧೀಶರ ಸಂವಿಧಾನ ಪೀಠದ ನೇತೃತ್ವ ವಹಿಸಿದ್ದ ಮು.ನ್ಯಾ.ರಂಜನ ಗೊಗೊಯಿ ಅವರು ನ.17ರಂದು ಸೇವೆಯಿಂದ ನಿವೃತ್ತರಾಗಲಿದ್ದು,ಅದಕ್ಕೂ ಮುನ್ನವೇ ಈ ಪ್ರಕರಣದ ತೀರ್ಪು ಪ್ರಕಟಗೊಳ್ಳುವ ನಿರೀಕ್ಷೆಯಿದೆ.

ಸಂಧಾನದ ಮೂಲಕ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸುವ ಎಲ್ಲ ಪ್ರಯತ್ನಗಳು ವಿಫಲಗೊಂಡ ಬಳಿಕ ಕಳೆದ ಆ.6ರಿಂದ ದೈನಂದಿನ ವಿಚಾರಣೆಯನ್ನು ಆರಂಭಿಸಿದ್ದ ಪೀಠವು ಕಟ್ಟುನಿಟ್ಟಾದ ಗಡುವಿಗೆ ಅಂಟಿಕೊಂಡಿತ್ತು. ಕಳೆದ ಕೆಲವು ವಾರಗಳಲ್ಲಿ ವಿಚಾರಣೆಯ ಅವಧಿಯನ್ನು ವಿಸ್ತರಿಸಿದ್ದ ನ್ಯಾಯಾಧೀಶರು ಕಾಲಹರಣಕ್ಕಾಗಿ ವಕೀಲರನ್ನು ತರಾಟೆಗೂ ಎತ್ತಿಕೊಂಡಿದ್ದರು.

ಬುಧವಾರ ಬೆಳಿಗ್ಗೆಯೂ ವಕೀಲರೋರ್ವರು ತನ್ನ ವಾದವನ್ನು ಮಂಡಿಸಲು ಇನ್ನಷ್ಟು ಸಮಯಾವಕಾಶ ಕೋರಿದಾಗ ‘ಈಗಾಗಲೇ ಸಾಕಷ್ಟಾಗಿದೆ ’ಎಂದು ಘೋಷಿಸಿದ ನ್ಯಾ.ಗೊಗೊಯಿ ಅವರು ಇಂದು ಸಂಜೆ ಐದು ಗಂಟೆಯೊಳಗೆ ತಾವು ವಿಚಾರಣೆಯನ್ನು ಮುಗಿಸುತ್ತಿರುವುದಾಗಿ ಹೇಳಿದರು.

ಒಂದು ವಾರದ ದಸರಾ ರಜೆಯ ಬಳಿಕ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಪ್ರಕರಣದಲ್ಲಿ ದೈನಂದಿನ ವಿಚಾರಣೆಯನ್ನು ಪುನರಾರಂಭಿಸಿತ್ತು, ಬುಧವಾರ 40 ದಿನಗಳ ವಾದವಿವಾದಗಳು ಅಂತ್ಯಗೊಂಡಿವೆ.

 1989ರವರೆಗೂ ಹಿಂದುಗಳು ಅಯೋಧ್ಯೆಯ ಭೂಮಿಯ ಮೇಲೆ ಹಕ್ಕು ಮಂಡಿಸಿರಲಿಲ್ಲ ಎಂದು ತಿಳಿಸಿದ್ದ ಮುಸ್ಲಿಂ ಕಕ್ಷಿದಾರರು,1992,ಡಿಸೆಂಬರ್‌ನಲ್ಲಿ ಧ್ವಂಸಗೊಳ್ಳುವ ಮುನ್ನ ಇದ್ದ ರೀತಿಯಲ್ಲಿ ಬಾಬರಿ ಮಸೀದಿಯ ಪುನರ್‌ನಿರ್ಮಾಣಕ್ಕೆ ಕೋರಿದ್ದಾರೆ.

ನಾಲ್ಕು ಸಿವಿಲ್ ದಾವೆಗಳಿಗೆ ಸಂಬಂಧಿಸಿದಂತೆ ಅಲಹಾಬಾದ್ ಉಚ್ಚ ನ್ಯಾಯಾಲಯವು 2010ರಲ್ಲಿ ನೀಡಿದ್ದ ತೀರ್ಪಿನ ವಿರುದ್ಧ 14 ಮೇಲ್ಮನವಿಗಳನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು. ಅಯೋಧ್ಯೆಯಲ್ಲಿನ 2.77 ಎಕರೆ ನಿವೇಶನವನ್ನು ಸುನ್ನಿ ವಕ್ಫ್ ಮಂಡಳಿ,ನಿರ್ಮೋಹಿ ಅಖಾಡಾ ಮತ್ತು ರಾಮ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿತ್ತು.

ಸರ್ವೋಚ್ಚ ನ್ಯಾಯಾಲಯವು ಪ್ರಕರಣದಲ್ಲಿ ಲಿಖಿತ ಹೇಳಿಕೆಗಳನ್ನು ಸಲ್ಲಿಸಲು ಕಕ್ಷಿದಾರರಿಗೆ ಮೂರು ದಿನಗಳ ಕಾಲಾವಕಾಶವನ್ನು ನೀಡಿದೆ.

ಪ್ರಕರಣದ ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ಅಯೋಧ್ಯೆ ಜಿಲ್ಲೆಯಲ್ಲಿ ಡಿ.10ರವರೆಗೆ ಕಲಂ 144ರಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News