ಕೈಗಾರಿಕಾ ನೀತಿ-2020 ಕರಡು: ಅಧಿಕಾರಿಗಳೊಂದಿಗೆ ಸಚಿವ ಜಗದೀಶ್ ಶೆಟ್ಟರ್ ಸಭೆ

Update: 2019-10-16 16:33 GMT

ಬೆಂಗಳೂರು, ಅ. 16: ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಕ್ಕೆ ಆದ್ಯತೆ ನೀಡಲಾಗುತ್ತಿದೆ. ಎಂಎಸ್‌ಎಂಇ ಕ್ಷೇತ್ರಕ್ಕೆ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ‘ಸಾರ್ಥಕ್ ಯೋಜನೆ’ ಅನುಷ್ಠಾನದತ್ತಲೂ ಗಮನಹರಿಸಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಬುಧವಾರ ನಗರದ ಉದ್ಯೋಗ ಮಿತ್ರ ಭವನದಲ್ಲಿ ಕೈಗಾರಿಕಾ ನೀತಿ-2020 ಕರಡು ಸಿದ್ದಪಡಿಸುವ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಎಂಎಸ್‌ಎಂಇ ಉದ್ಯಮಿದಾರರನ್ನು ಉತ್ತೇಜಿಸಲು ಸರಕಾರದ ವತಿಯಿಂದ ನೀಡುವ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿರುವ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದರು.

ಬಹುತೇಕ ಹೂಡಿಕೆದಾರರು ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಾರೆ. ಈ ನಿಟ್ಟಿನಲ್ಲಿ ಬೆಂಗಳೂರನ್ನು 2 ಟಯರ್ ಸಿಟಿಯಾಗಿ ನಿರ್ಮಾಣ ಮಾಡಲು ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಅದಕ್ಕೆ ಬೇಕಾದ ವ್ಯವಸ್ಥೆ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಈಗಾಗಲೇ 9 ಜಿಲ್ಲೆಯಲ್ಲಿ ವಿವಿಧ ವಲಯಗಳ ಕ್ಲಸ್ಟರ್ ನಿರ್ಮಾಣ ಪ್ರಗತಿಯಲ್ಲಿದೆ. ಹೂಡಿಕೆದಾರರನ್ನು ಇತರೆ ಜಿಲ್ಲೆಯತ್ತ ಆಕರ್ಷಿಸಲು ಬೇಕಾದ ಸೌಕರ್ಯ ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸಚಿವ ಜಗದೀಶ್ ಶೆಟ್ಟರ್‌ಗೆ ಮಾಹಿತಿ ನೀಡಿದರು.

ಕೈಗಾರಿಕಾ ನೀತಿಯಲ್ಲಿ ವಿಶೇಷ ಹೂಡಿಕೆ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಗುಜರಾತ್‌ನಲ್ಲಿ ಈ ವಲಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇದಕ್ಕಾಗಿಯೇ ಗುಜರಾತ್‌ನಲ್ಲಿ ವಿಶೇಷ ಹೂಡಿಕೆ ವಲಯ-2009 ಕಾಯ್ದೆ ತರಲಾಗಿದೆ. ಈ ಕಾಯ್ದೆ ಅಧ್ಯಯನ ನಡೆಸಿ ನಂತರ ಕರ್ನಾಟಕದಲ್ಲಿ ಅನುಷ್ಠಾನ ಮಾಡುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು.

2014-15ರಲ್ಲಿ ಕೇಂದ್ರ ಸರಕಾರ ಘೋಷಿಸಿದ ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್ ಚುರುಕುಗೊಳಿಸಿ, ಇದಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನದ ವೆಚ್ಚದ ಮಾಹಿತಿ ಸಿದ್ಧಪಡಿಸಿ ಎಂದು ಅಧಿಕಾರಿಗಳಿಗೆ ಸಚಿವರು ತಿಳಿಸಿದರು. ಭೂ ಹಂಚಿಕೆ ಸಂಬಂಧ ಏಕಗವಾಕ್ಷಿ ಪದ್ಧತಿ ತರುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕಿದೆ. ಇತರೆ ರಾಜ್ಯದಲ್ಲಿ ಏಕಗವಾಕ್ಷಿ ಪದ್ಧತಿ ಇದೆ. ಭೂಮಿ ಹಂಚಿಕೆ ವ್ಯವಸ್ಥೆಯು ಶೀಘ್ರವೇ ಏಕಗವಾಕ್ಷಿ ಆಗಬೇಕಿದೆ ಎಂದು ಜಗದೀಶ್ ಶೆಟ್ಟರ್ ಇದೇ ವೇಳೆ ತಿಳಿಸಿದರು.

ಕೈಗಾರಿಕೆ ಟೌನ್‌ಶಿಪ್ ನಿರ್ಮಾಣದಲ್ಲಿ ಗುಜರಾತ್, ತಮಿಳುನಾಡು ಯಶಸ್ವಿಯಾಗಿದೆ. ಇದರ ಬಗ್ಗೆಯೂ ಅಧ್ಯಯನ ನಡೆಸುವಂತೆಯೂ ಸಲಹೆ ನೀಡಿದರು. ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಡಿಬಿ) ಕಟ್ಟಡಗಳ ಅಭಿವೃದ್ಧಿಗೆ ಅನುಸರಿಸುವ ಮಾನದಂಡದ ಬಗ್ಗೆ ಮಾಹಿತಿ ಪಡೆದರು. ಕೆಐಡಿಬಿ ಬಗ್ಗೆ ಸಾಕಷ್ಟು ದೂರು ಬರುತ್ತಿವೆ. ಹೀಗಾಗಿ ಕೆಐಡಿಬಿ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು. ಒಟ್ಟಾರೆ ನೂತನ ಕೈಗಾರಿಕಾ ನೀತಿ ಕೈಗಾರಿಕಾ ಸ್ನೇಹಿಯಾಗಿರುವ ಜೊತೆಗೆ ಮಹಿಳಾ ಉದ್ಯಮಿಗಳು, ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆದಾರರು ಸೇರಿದಂತೆ ಕೈಗಾರಿಕೋದ್ಯಮಿಗಳಿಗೆ ಸ್ನೇಹಮಯವಾಗಿರಬೇಕು ಎಂದುಜಗದೀಶ್ ಶೆಟ್ಟರ್ ಸಲಹೆ ನೀಡಿದರು.

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News