ಬಾಂಗ್ಲಾ ಸೈನಿಕರಿಂದ ಗುಂಡಿನ ದಾಳಿ: ಬಿಎಸ್ ಎಫ್ ಯೋಧ ಮೃತ್ಯು

Update: 2019-10-17 12:55 GMT

ಕೊಲ್ಕತ್ತಾ, ಅ.17: ಪಶ್ಚಿಮ ಬಂಗಾಳದ ಗಡಿ ಸಮೀಪ ಬಾಂಗ್ಲಾದೇಶಿ ಗಡಿ ಭದ್ರತಾ ಪಡೆ ಗುಂಡು ಹಾರಾಟ ನಡೆಸಿದ ಪರಿಣಾಮ ಬಿಎಸ್ ಎಫ್ ಯೋಧರೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ದಾಳಿಯಲ್ಲಿ ಗಾಯಗೊಂಡ ಯೋಧರೊಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

"ಇಂದು ಬೆಳಗ್ಗೆ ಗಡಿ ಸಮೀಪವಿರುವ ಪದ್ಮಾ ನದಿಯಲ್ಲಿ ಮೀನುಗಾರಿಕೆಗೆಂದು ಮೂವರು ಭಾರತೀಯ ಮೀನುಗಾರರು ತೆರಳಿದ್ದರು. ನಂತರ ಅವರು ಬಿಎಸ್ ಎಫ್ ಪೋಸ್ಟ್ ಗೆ ಬಂದು ಬಾಂಗ್ಲಾ ಸೈನಿಕರು ತಮ್ಮನ್ನು ಸೆರೆಹಿಡಿದಿದ್ದಾರೆ. ಆನಂತರ ಇಬ್ಬರನ್ನು ಬಿಡುಗಡೆಗೊಳಿಸಿದರು ಎಂದು ತಿಳಿಸಿದರು" ಎಂದು ಬಿಎಸ್ ಎಫ್ ಪ್ರಕಟನೆಯಲ್ಲಿ ತಿಳಿಸಿದೆ.

ಈ ಘಟನೆಗೆ ಸಂಬಂಧಿಸಿ ಮಾತುಕತೆಗಾಗಿ ಬಾಂಗ್ಲಾ ಆಹ್ವಾನಿಸಿತು. ಪೋಸ್ಟ್ ಕಮಾಂಡರ್ ಮತ್ತು ಐವರು ಯೋಧರು ಬಿಎಸ್ ಎಫ್ ಬೋಟ್ ನಲ್ಲಿ ತೆರಳಿದರು. ಬಾಂಗ್ಲಾ ಗಡಿ ಭದ್ರತಾ ಪಡೆಗಳೊಂದಿಗೆ ಮಾತುಕತೆ ನಡೆಯಿತು. ಆದರೆ ಬಾಂಗ್ಲಾ ಪಡೆಗಳು ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ಒಪ್ಪದೆ, ಬಿಎಸ್ ಎಫ್ ಯೋಧರನ್ನು ಸುತ್ತುವರಿದರು ಎನ್ನಲಾಗಿದೆ.

"ಪರಿಸ್ಥಿತಿ ಸರಿಯಿಲ್ಲ ಎಂದರಿತ ಬಿಎಸ್ ಎಫ್ ತಂಡ ಕೂಡಲೇ ಅಲ್ಲಿಂದ ಹಿಂದಿರುಗಿತು. ಹಿಂದಿರುಗುತ್ತಿದ್ದ ಬಿಎಸ್ ಎಫ್ ಸೈನಿಕರ ಮೇಲೆ ಅವರು ಗುಂಡಿನ ಮಳೆಗರೆದರು" ಎಂದು ಬಿಎಸ್ ಎಫ್ ತಿಳಿಸಿದೆ. ಕೂಡಲೇ ಇಬ್ಬರು ಯೋಧರನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಆದರೆ ಹೆಡ್ ಕಾನ್ ಸ್ಟೇಬಲ್ ವಿಜಯ್ ಭಾನ್ ಸಿಂಗ್ ಮೃತಪಟ್ಟರು ಎಂದು ಬಿಎಸ್ ಎಫ್ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News