ಸಿರಿಯ ಕಾರ್ಯಾಚರಣೆ ನಿಲ್ಲಿಸಲು ಟರ್ಕಿ ನಕಾರ

Update: 2019-10-17 17:18 GMT

ಅಂಕಾರ (ಟರ್ಕಿ), ಅ. 17: ಸಿರಿಯದಲ್ಲಿರುವ ಕುರ್ದಿಶ್ ಪಡೆಗಳ ವಿರುದ್ಧ ತಾನು ನಡೆಸುತ್ತಿರುವ ಭೀಕರ ದಾಳಿಯನ್ನು ನಿಲ್ಲಿಸುವಂತೆ ಒತ್ತಾಯಿಸುವ ಅಂತಾರಾಷ್ಟ್ರೀಯ ಒತ್ತಡವನ್ನು ಟರ್ಕಿ ಬುಧವಾರ ಧಿಕ್ಕರಿಸಿದೆ. ಯುದ್ಧವಿರಾಮವೊಂದನ್ನು ಏರ್ಪಡಿಸುವುದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಪಾಧ್ಯಕ್ಷ ಮೈಕ್ ಪೆನ್ಸ್‌ರನ್ನು ಟರ್ಕಿ ರಾಜಧಾನಿ ಅಂಕಾರಕ್ಕೆ ಕಳುಹಿಸಿದ ಬಳಿಕ ಟರ್ಕಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಉತ್ತರ ಸಿರಿಯದಲ್ಲಿ ಟರ್ಕಿ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ಮುಂದುವರಿಯುವುದು ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಘೋಷಿಸಿದ್ದಾರೆ.

ಅದೇ ವೇಳೆ, ಟರ್ಕಿಯ ಆಕ್ರಮಣದಿಂದ ಪಾರಾಗುವುದಕ್ಕಾಗಿ ಸಿರಿಯ ಸರಕಾರದೊಂದಿಗೆ ಹತಾಶ ಒಪ್ಪಂದ ಮಾಡಿಕೊಂಡಿರುವ ಕುರ್ದ್ ಪಡೆಗಳು, ಸಿರಿಯ ಸರಕಾರಿ ಸೇನೆ ಮತ್ತು ಅದರ ಮಿತ್ರ ದೇಶ ರಶ್ಯದ ಸೈನಿಕರು ಗಡಿ ಪಟ್ಟಣ ಕೊಬಾನೆ ಪ್ರವೇಶಕ್ಕೆ ಬುಧವಾರ ಅನುವು ಮಾಡಿಕೊಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.

ಸಿರಿಯದ ಕುರ್ದ್‌ಗಳಿಗೆ ಕೊಬಾನೆ ಪಟ್ಟಣ ಅತ್ಯಂತ ಮಹತ್ವದ್ದಾಗಿದೆ. ಈ ಪಟ್ಟಣವನ್ನು ಅವರು 2015ರಲ್ಲಿ ಅಮೆರಿಕ ಸೈನಿಕರ ಬೆಂಬಲದೊಂದಿಗೆ ನಡೆದ ಭೀಕರ ಯುದ್ಧದ ಮೂಲಕ ಐಸಿಸ್ ಭಯೋತ್ಪಾದಕರಿಂದ ವಶಪಡಿಸಿಕೊಂಡಿದ್ದರು.

ಪೆನ್ಸ್‌ರನ್ನು ಭೇಟಿಯಾಗುವುದಿಲ್ಲ: ಎರ್ದೊಗಾನ್

ಉತ್ತರ ಸಿರಿಯದಲ್ಲಿ ಕುರ್ದ್ ಪಡೆಗಳ ವಿರುದ್ಧ ಟರ್ಕಿ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವುದಕ್ಕೆ ಸಂಬಂಧಿಸಿ ಯುದ್ಧವಿರಾಮ ಏರ್ಪಡಿಸುವುದಕ್ಕಾಗಿ ಟರ್ಕಿಗೆ ಬಂದಿರುವ ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್‌ರನ್ನು ಭೇಟಿಯಾಗಲು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ನಿರಾಕರಿಸಿದ್ದಾರೆ.

‘‘ನಾನು ಹಿಂದೆ ಸರಿಯುವುದಿಲ್ಲ. ನಾನು ಅವರನ್ನು ಭೇಟಿಯಾಗುವುದಿಲ್ಲ’’ ಎಂದು ಪೆನ್ಸ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊರನ್ನು ಉಲ್ಲೇಖಿಸಿ ಎರ್ದೊಗಾನ್ ಹೇಳಿದರು.

‘‘ಅವರು ಅವರ ಸಮಾನ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂದರೆ ಅವರನ್ನು ನಾನು ಭೇಟಿಯಾಗುತ್ತೇನೆ’’ ಎಂದರು.

ಯುದ್ಧವಿರಾಮಕ್ಕೆ ಬರದಿದ್ದರೆ ಇನ್ನಷ್ಟು ದಿಗ್ಬಂಧನ: ಅಮೆರಿಕ ಖಜಾನೆ ಕಾರ್ಯದರ್ಶಿ ಎಚ್ಚರಿಕೆ

ಉತ್ತರ ಸಿರಿಯದಲ್ಲಿ ಕುರ್ದ್ ಪಡೆಗಳ ಮೇಲೆ ಟರ್ಕಿ ಸೇನೆ ನಡೆಸುತ್ತಿರುವ ಕಾರ್ಯಾಚರಣೆ ನಿಲ್ಲದಿದ್ದರೆ ಟರ್ಕಿ ವಿರುದ್ಧದ ಆರ್ಥಿಕ ದಿಗ್ಬಂಧನಗಳನ್ನು ಇನ್ನಷ್ಟು ಹೆಚ್ಚಿಸಲು ಅಮೆರಿಕ ಸಿದ್ಧವಾಗಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಟೀವನ್ ಮನುಚಿನ್ ಬುಧವಾರ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಾರ ಟರ್ಕಿಯ ಉನ್ನತ ಅಧಿಕಾರಿಗಳ ಮೇಲೆ ದಿಗ್ಬಂಧನಗಳನ್ನು ವಿಧಿಸಿದ್ದಾರೆ ಹಾಗೂ ಟರ್ಕಿಯಿಂದ ಮಾಡಿಕೊಳ್ಳುವ ಆಮದುಗಳ ಮೇಲೆ ಹೆಚ್ಚಿನ ಸುಂಕವನ್ನ ಹೇರಿದ್ದಾರೆ. ಅದೂ ಅಲ್ಲದೆ, ಟರ್ಕಿ ತನ್ನ ಸಿರಿಯ ಕಾರ್ಯಾಚರಣೆಯನ್ನು ನಿಲ್ಲಿಸದಿದ್ದರೆ ಅದರ ಆರ್ಥಿಕತೆಯನ್ನು ‘ಸರ್ವನಾಶ’ಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

‘‘ಅವರು ಯುದ್ಧವಿರಾಮಕ್ಕೆ ಮುಂದಾಗದಿದ್ದರೆ ಹೆಚ್ಚುವರಿ ದಿಗ್ಬಂಧನಗಳನ್ನು ವಿಧಿಸಲಾಗುವುದು’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮನುಚಿನ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News