ಸಿರಿಯದಿಂದ ಸೈನಿಕರ ವಾಪಸಾತಿ: ಟ್ರಂಪ್, ಪೆಲೋಸಿ ಜಟಾಪಟಿ

Update: 2019-10-17 17:32 GMT

ವಾಶಿಂಗ್ಟನ್, ಅ. 17: ಉತ್ತರ ಸಿರಿಯದಿಂದ ಅಮೆರಿಕದ ಸೈನಿಕರನ್ನು ಹಿಂದಕ್ಕೆ ಪಡೆಯುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ಧಾರದ ವಿರುದ್ಧ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯರು ಪಕ್ಷಭೇದ ಮರೆತು ಬುಧವಾರ ಸಿಡಿದೆದ್ದಿದ್ದಾರೆ. ಆದರೆ, ತನ್ನ ನಿರ್ಧಾರವು ‘ಅತ್ಯಂತ ಶ್ರೇಷ್ಠ ತಂತ್ರಗಾರಿಕೆಯಾಗಿದೆ’ ಎಂದು ಹೇಳಿ ಟ್ರಂಪ್ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾರೆ.

ಸಿರಿಯದಿಂದ ಅಮೆರಿಕ ಸೈನಿಕರನ್ನು ಹಿಂದಕ್ಕೆ ಪಡೆಯುವ ನಿರ್ಧಾರವನ್ನು ಖಂಡಿಸುವ ನಿರ್ಣಯವನ್ನು ಸದನ 354-60 ಮತಗಳ ಬೃಹತ್ ಅಂತರದಿಂದ ಅಂಗೀಕರಿಸಿತು. ಟ್ರಂಪ್‌ರ ರಿಪಬ್ಲಿಕನ್ ಪಕ್ಷದ 129 ಸದಸ್ಯರು ನಿರ್ಣಯದ ಪರವಾಗಿ ಮತ ಹಾಕಿದರು.

ಅದೇ ವೇಳೆ, ಕುರ್ದಿಶ್ ಬಂಡುಕೋರರ ವಿರುದ್ಧ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವಂತೆಯೂ ನಿರ್ಣಯ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್‌ರಿಗೆ ಕರೆ ನೀಡಿದೆ.

ಈ ನಡುವೆ, ಶ್ವೇತಭವನದಲ್ಲಿ ಅಧ್ಯಕ್ಷ ಟ್ರಂಪ್ ಜೊತೆ ನಡೆದ ಸಭೆಯಿಂದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್, ಡೆಮಾಕ್ರಟಿಕ್ ಪಕ್ಷದ ನ್ಯಾನ್ಸಿ ಪೆಲೋಸಿ ಮತ್ತು ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಸಂಸದರ ನಾಯಕ ಚಾರ್ಲ್ಸ್ ಶೂಮರ್ ಹೊರ ನಡೆದಿದ್ದಾರೆ.

ಟ್ರಂಪ್ ಜೊತೆ ನಡೆದ ಸಭೆ ಉದ್ವಿಗ್ನಕಾರಿಯಾಗಿತ್ತು ಎಂದು ಅವರು ಬಳಿಕ ಬಣ್ಣಿಸಿದರು. ಟ್ರಂಪ್, ಪೆಲೋಸಿಯನ್ನು ‘ಮೂರನೇ ದರ್ಜೆಯ ರಾಜಕಾರಣಿ’ ಎಂಬುದಾಗಿ ಬಣ್ಣಿಸಿದರು ಎಂದು ಶೂಮರ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಪೆಲೋಸಿ, ಟ್ರಂಪ್ ಅಸ್ತವ್ಯಸ್ತಗೊಂಡಿದ್ದಾರೆ ಎಂದು ಬಣ್ಣಿಸಿದರು.

ಇದಕ್ಕೆ ಟ್ವಿಟರ್‌ನಲ್ಲಿ ತಿರುಗೇಟು ನೀಡಿದ ಟ್ರಂಪ್, ಸ್ವತಃ ಪೆಲೋಸಿ ಅಸ್ತವ್ಯಸ್ತಗೊಂಡಿದ್ದಾರೆ ಹಾಗೂ ಅವರಿಗೆ ‘ತುರ್ತಾಗಿ ನೆರವಿನ ಅಗತ್ಯವಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News