ದ್ವಿತೀಯ ಸುತ್ತಿನಲ್ಲಿ ಸೋತ ಸಿಂಧು, ಸಮೀರ್, ಪ್ರಣೀತ್

Update: 2019-10-18 04:45 GMT

ಹೈದರಾಬಾದ್, ಅ.17: ಡೆನ್ಮಾರ್ಕ್ ಓಪನ್ ಬಿಡಬ್ಲುಎಫ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಗುರುವಾರ ಮಹಿಳೆಯರ ಸಿಂಗಲ್ಸ್ ನ 2ನೇ ಸುತ್ತಿನ ಪಂದ್ಯದಲ್ಲಿ 17ರ ವಯಸ್ಸಿನ ಆಟಗಾರ್ತಿ ಆ್ಯನ್ ಸಿ ಯಂಗ್ ವಿಶ್ವ ಚಾಂಪಿಯನ್ ಪಿ.ವಿ.ಸಿಂಧುರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿ ಶಾಕ್ ನೀಡಿದರು.

 ಸಿಂಧು ಕೊರಿಯಾದ ಯುವ ಆಟಗಾರ್ತಿ ಆಕ್ರಮಣಕಾರಿ ಆಟದ ಎದುರು ಪರದಾಟ ನಡೆಸಿ 14-21,17-21 ಅಂತರದಿಂದ ಆಘಾತಕಾರಿ ಸೋಲನುಭವಿಸಿದರು. ಆಗಸ್ಟ್‌ನಲ್ಲಿ ಐತಿಹಾಸಿಕ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ ಬಳಿಕ ಹೈದರಾಬಾದ್ ಆಟಗಾರ್ತಿ ಸತತ ಮೂರನೇ ಬಾರಿ ಟೂರ್ನಿಯಲ್ಲಿ ಬೇಗನೇ ಸೋತು ನಿರ್ಗಮಿಸಿದ್ದಾರೆ. ಸಿಂಧು ಕಳೆದ ತಿಂಗಳು ನಡೆದ ಚೀನಾ ಓಪನ್‌ನಲ್ಲಿ 2ನೇ ಸುತ್ತಿನಲ್ಲೂ ಹಾಗೂ ಕೊರಿಯಾ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ಸೋತಿದ್ದರು.

ಕಳೆದ ವರ್ಷ ಕೆನಡಾ ಓಪನ್ ಪ್ರಶಸ್ತಿ ಜಯಿಸಿದ್ದ ಯಂಗ್ ಆಗಸ್ಟ್ ನಲ್ಲಿ ಹೈದರಾಬಾದ್ ಓಪನ್‌ನ ಫೈನಲ್ ಸುತ್ತಿನಲ್ಲಿ ಸೋತಿದ್ದರು. ಸಿಂಧು ಅವರು ಯಂಗ್ ವಿರುದ್ಧ ಸೋತಿರುವ ಮೊದಲ ಪ್ರಮುಖ ಆಟಗಾರ್ತಿ ಯಾಗಿದ್ದಾರೆ.

 ವಿಶ್ವದ ನಂ.19ನೇ ಆಟಗಾರ್ತಿ ಯಂಗ್ ಮೊದಲ ಗೇಮ್‌ನಲ್ಲಿ ಆರಂಭದಲ್ಲಿ 6-1 ಮುನ್ನಡೆ ಪಡೆದರು. ಸಿಂಧು ಹಿನ್ನಡೆಯನ್ನು 7-8ಕ್ಕೆ ಕುಗ್ಗಿಸಿದರು. ಆರು ಅಂಕ ಗಳಿಸಿದ ಯಂಗ್ ಮತ್ತೊಮ್ಮೆ 14-7 ಮುನ್ನಡೆ ಪಡೆದರು. ಚುರುಕಿನ ರಿಟರ್ನ್ಸ್ ಮೂಲಕ ಸಿಂಧುಗೆ ಲಯ ಕಂಡುಕೊಳ್ಳದಂತೆ ನೋಡಿಕೊಂಡ ಯಂಗ್ ಮೊದಲ ಗೇಮ್‌ನ್ನು 21-14 ಅಂತರದಿಂದ ಗೆದ್ದುಕೊಂಡರು.

  ಸಿಂಧು ಎರಡನೇ ಗೇಮ್‌ನ ಆರಂಭದಲ್ಲಿ 8-4 ಮುನ್ನಡೆ ಸಾಧಿಸಿ ಉತ್ತಮ ಪ್ರದರ್ಶನ ನೀಡಿದರು. ಒಂದು ಹಂತದಲ್ಲಿ 16-14 ಮುನ್ನಡೆಯಲ್ಲಿದ್ದ ಸಿಂಧು ತಪ್ಪೆಸಗಿದರು. ಈ ಅವಕಾಶವನ್ನು ಯಂಗ್ ಚೆನ್ನಾಗಿ ಬಳಸಿಕೊಂಡರು. ಹಲವು ಬಾರಿ ತಪ್ಪೆಸಗಿದ ಸಿಂಧು ವಿರುದ್ಧ ಸತತ 6 ಅಂಕ ಗಳಿಸಿದ ಯಂಗ್ ಜಯಶಾಲಿಯಾದರು.ಸಿಂಧು ಅವರನ್ನು ಟೂರ್ನಿಯಿಂದ ಹೊರಗಟ್ಟಿದರು.

ಇದೇ ವೇಳೆ, ಪುರುಷರ ಸಿಂಗಲ್ಸ್ ನಲ್ಲಿ ಸಮೀರ್ ವರ್ಮಾ ಚೀನಾದ ಚೆನ್ ಲಾಂಗ್ ವಿರುದ್ಧ 12-21, 10-21 ಗೇಮ್‌ಗಳ ಅಂತರದಿಂದ ಸೋತರೆ, ಸಾಯಿ ಪ್ರಣೀತ್ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ 6-21, 14-21 ಅಂತರದ ನೇರ ಗೇಮ್‌ಗಳಿಂದ ಶರಣಾದರು.

ಥಾಯ್ಲೆಂಡ್ ಓಪನ್ ಚಾಂಪಿಯನ್‌ಗಳಾದ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್ ನಲ್ಲಿ ಚೀನಾದ ಆರನೇ ಶ್ರೇಯಾಂಕದ ಹ್ಯಾನ್ ಚೆಂಗ್ ಹಾಗೂ ಝೌ ಹಾವೊ ಡಾಂಗ್ ವಿರುದ್ಧ 16-21, 15-21 ಅಂತರದಿಂದ ಸೋಲನುಭವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News