ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಮರ್ಕರಮ್‌ಗೆ ಗಾಯ, 3ನೇ ಟೆಸ್ಟ್ ಗೆ ಅಲಭ್ಯ

Update: 2019-10-18 04:50 GMT

  ಹೊಸದಿಲ್ಲಿ, ಅ.17: ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸತತ ಕಳಪೆ ಪ್ರದರ್ಶನದಿಂದ ಹತಾಶರಾಗಿ ಮಣಿಕಟ್ಟನ್ನು ಗಟ್ಟಿವಸ್ತುವಿಗೆ ಗುದ್ದಿ ಗಾಯ ಮಾಡಿಕೊಂಡಿರುವ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್ ಮನ್ ಏಡೆನ್ ಮರ್ಕರಮ್ ರಾಂಚಿಯಲ್ಲಿ ಶನಿವಾರ ಆರಂಭವಾಗಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.

  ದಕ್ಷಿಣ ಆಫ್ರಿಕಾ ಈಗಾಗಲೇ ಸತತ 2 ಪಂದ್ಯಗಳಲ್ಲಿ ಸೋಲನುಭವಿಸಿ ಸರಣಿ ಕೈಚೆಲ್ಲಿದೆ. ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿ ವಿಶ್ವಾಸ ಮೂಡಿಸಿದ್ದ ಮರ್ಕರಮ್ ಟೆಸ್ಟ್ ಸರಣಿಯಲ್ಲಿ ಇದೇ ಫಾರ್ಮ್ ಮುಂದುವರಿಸಲು ವಿಫಲರಾಗಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ 5 ಹಾಗೂ 39 ರನ್ ಗಳಿಸಿದ್ದ ಮರ್ಕರಮ್ ಪುಣೆಯಲ್ಲಿ ನಡೆದ 2ನೇ ಟೆಸ್ಟ್‌ನ ಎರಡೂ ಇನಿಂಗ್ಸ್ ಗಳಲ್ಲಿ ಖಾತೆ ತೆರೆಯಲು ವಿಫಲವಾಗಿ ದಯನೀಯ ವೈಫಲ್ಯ ಕಂಡಿದ್ದರು.

 ‘‘ಪುಣೆ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಔಟಾದ ಬಳಿಕ ಮರ್ಕರಮ್‌ಗೆ ಗಾಯವಾಗಿದೆ. ತನ್ನ ಕಳಪೆ ಪ್ರದರ್ಶನದಿಂದ ಹತಾಶರಾಗಿದ್ದ ಅವರು ಒಂದು ಗಟ್ಟಿ ವಸ್ತುವನ್ನು ಹೊಡೆದ ಪರಣಾಮ ಮಣಿಕಟ್ಟಿನ ಭಾಗಕ್ಕೆ ಗಾಯವಾಗಿದೆ’’ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಪತ್ರಿಕಾಪ್ರಕಟನೆಯಲ್ಲಿ ತಿಳಿಸಿದೆ.

 ಗಟ್ಟಿಯಾದ ವಸ್ತು ಯಾವುದೆಂದು ಸ್ಪಷ್ಟಪಡಿಸದ ದಕ್ಷಿಣ ಆಫ್ರಿಕಾ ಕ್ರಿಕೆಟ್, ಮರ್ಕರಮ್ ತನ್ನ ತಾಯ್ನಿಡಿಗೆ ವಾಪಸಾಗಲಿದ್ದು, ಅವರ ಬದಲಿ ಆಟಗಾರರನ್ನು ಕಣಕ್ಕಿಳಿಸುವುದಿಲ್ಲ ಎಂದಿದೆ. ‘‘ಏಡೆನ್ ಮರ್ಕರಮ್‌ಗೆ ನಡೆಸಲಾಗಿರುವ ಸಿಟಿ ಸ್ಕಾನಿಂಗ್‌ನಲ್ಲಿ ಮಣಿಕಟ್ಟು ಮೂಳೆಯಲ್ಲಿ ಬಿರುಕು ಬಿಟ್ಟಿರುವುದು ಗೊತ್ತಾಗಿದೆ. ದಕ್ಷಿಣ ಆಫ್ರಿಕಾಕ್ಕೆ ವಾಪಸಾದ ಬಳಿಕ ಸ್ಪೆಷಲಿಸ್ಟ್ ವೈದ್ಯರನ್ನು ಸಂಪರ್ಕಿಸಲು ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ’’ ಎಂದು ಟೀಮ್ ಡಾಕ್ಟರ್ ಹಶೇಂದ್ರ ರಾಮ್‌ಜೀ ಹೇಳಿದ್ದಾರೆ.

 ‘‘ನನಗೆ ತಾಯ್ನಡಿಗೆ ತೆರಳಲು ತುಂಬಾ ಬೇಸರವಾಗುತ್ತಿದೆ. ನಾನು ಏನು ತಪ್ಪು ಮಾಡಿದ್ದೇನೆಂದು ಸಂಪೂರ್ಣ ಅರಿವಾಗಿದೆ. ಇದಕ್ಕೆ ಪೂರ್ಣ ಹೊಣೆ ಹೊರುತ್ತೇನೆ. ತಂಡದ ಕಳಪೆ ಪ್ರದರ್ಶನ ನನಗೆ ತುಂಬಾ ನೋವುಂಟು ಮಾಡಿದೆ. ಇದರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಉಳಿದವರು ಪಾಠ ಕಲಿಯುವ ವಿಶ್ವಾಸ ನನಗಿದೆ. ನನ್ನ ಕಳಪೆ ಪ್ರದರ್ಶನಕ್ಕೆ ಕ್ಷಮೆ ಇಲ್ಲ’’ ಎಂದು ಮರ್ಕರಮ್ ಹೇಳಿದ್ದಾರೆ. ರವಿವಾರ ನಡೆದ ಪ್ರತ್ಯೇಕ ಘಟನೆಯಲ್ಲಿ ಆಸ್ಟ್ರೇಲಿಯದ ಆಲ್‌ರೌಂಡರ್ ಮಿಚೆಲ್ ಮಾರ್ಷಲ್ ಶೀಫೀಲ್ಡ್ ಶೀಲ್ಡ್ ಪಂದ್ಯದಲ್ಲಿ ಹತಾಶರಾಗಿ ಗೋಡೆಗೆ ತನ್ನ ಕೈಯನ್ನು ಗುದ್ದಿಕೊಂಡು ಕೈಮುರಿದುಕೊಂಡಿದ್ದರು. ಇದೀಗ ಅವರು ಆರು ವಾರಗಳ ಕಾಲ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News