2020ರ ಫ್ರೆಂಚ್ ಓಪನ್‌ನಲ್ಲಿ ಆಡಲಿದ್ದಾರೆ ಫೆಡರರ್

Update: 2019-10-18 04:51 GMT

ಪ್ಯಾರಿಸ್, ಅ.17: ಮುಂದಿನ ವರ್ಷ ನಡೆಯಲಿರುವ ಫ್ರೆಂಚ್ ಓಪನ್‌ನಲ್ಲಿ ನಾನು ಆಡುತ್ತೇನೆ ಎಂದು ಸ್ವಿಸ್ ಟೆನಿಸ್ ದಂತಕತೆ ರೋಜರ್ ಫೆಡರರ್ ಗುರುವಾರ ತಿಳಿಸಿದ್ದಾರೆ.

 ‘‘ನಾನು ಫ್ರೆಂಚ್ ಓಪನ್‌ನಲ್ಲಿ ಆಡಲಿದ್ದೇನೆ. ಅದಕ್ಕೂ ಮೊದಲು ನಾನು ಹೆಚ್ಚು ಪಂದ್ಯ ಆಡುವುದಿಲ್ಲ. ಏಕೆಂದರೆ ನಾನು ಸ್ವಲ್ಪ ಸಮಯ ಟೆನಿಸ್‌ನಿಂದ ದೂರ ಉಳಿಯಲಿದ್ದೇನೆ. ನನ್ನ ಕುಟುಂಬದೊಂದಿಗೆ ಕಾಲ ಕಳೆಯಲು ಸಮಯದ ಅಗತ್ಯವಿದೆ’’ ಎಂದು ಸಿಎನ್‌ಎನ್‌ಗೆ 38ರ ಹರೆಯದ ಫೆಡರರ್ ತಿಳಿಸಿದ್ದಾರೆ.

20 ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿರುವ ಫೆಡರರ್ ಮೂರು ವರ್ಷಗಳ ಬಿಡುವಿನ ಬಳಿಕ ಈ ವರ್ಷದ ಫ್ರೆಂಚ್ ಓಪನ್‌ನಲ್ಲಿ ಸ್ಪರ್ಧಿಸಿ ಸೆಮಿ ಫೈನಲ್ ತಲುಪಿದ್ದರು.

‘‘ವಿಂಬಲ್ಡನ್ ಬಳಿಕ ಹಾಗೂ ಯು.ಎಸ್. ಓಪನ್‌ಗಿಂತ ಮೊದಲು ನಡೆಯಲಿರುವ ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್ ನಲ್ಲಿ ನಾನು ಸ್ಪರ್ಧಿಸಲಿದ್ದೇನೆ. ಆದರೆ, ಫ್ರೆಂಚ್ ಓಪನ್‌ಗಿಂತ ಮೊದಲು ನನ್ನ ಆದ್ಯತೆ ಕುಟುಂಬದೊಂದಿಗೆ ರಜೆಯಲ್ಲಿ ಕಳೆಯುವುದಾಗಿದೆ. ನಮಗೆ ರಜೆಯ ಅಗತ್ಯವಿರುತ್ತದೆ. ವಿರಾಮದ ಅವಶ್ಯಕತೆಯೂ ಇದೆ. ಮುಖ್ಯವಾಗಿ ಒಲಿಂಪಿಕ್ಸ್ ಆಡುವಾಗ ವಿಶ್ರಾಂತಿ ಬೇಕಾಗುತ್ತದೆ’’ ಎಂದು ಫೆಡರರ್ ತಿಳಿಸಿದರು.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಫೆಡರರ್ ಚಿನ್ನದ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ. ಫೆಡರರ್ ಈ ತನಕ ಗೆಲ್ಲದ ಪ್ರಮುಖ ಪ್ರಶಸ್ತಿ ಇದಾಗಿದೆ.

ಫೆಡರರ್ ಎಲ್ಲ ನಾಲ್ಕು ಗ್ರಾನ್‌ಸ್ಲಾಮ್ ಟೂರ್ನಿಗಳನ್ನು ಜಯಿಸುವ ಜೊತೆಗೆ ಆರು ಬಾರಿ ಎಟಿಪಿ ಟೂರ್ ಫೈನಲ್ಸ್‌ಗಳನ್ನು ಗೆದ್ದುಕೊಂಡಿದ್ದಾರೆ. ಆದರೆ, ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಲು ಈಗಲೂ ಕಾಯುತ್ತಿದ್ದಾರೆ.

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸ್ವಿಸ್‌ನ ಸಹ ಆಟಗಾರ ಸ್ಟಾನ್ ವಾವ್ರಿಂಕ ಜೊತೆ ಡಬಲ್ಸ್ ನಲ್ಲಿ ಚಿನ್ನ ಪದಕ ಜಯಿಸಿದ್ದರು. 2012ರ ಲಂಡನ್ ಒಲಿಂಪಿಕ್ಸ್ ನಲ್ಲ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದ ಫೆಡರರ್ ಬ್ರಿಟನ್‌ನ ಆ್ಯಂಡಿ ಮರ್ರೆಗೆ 2-6, 1-6,4-6 ಅಂತರದಿಂದ ಸೋತಿದ್ದರು. ಫೆಡರರ್ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರಲಿಲ್ಲ. ಹೀಗಾಗಿ ಮರ್ರೆ ಮತ್ತೊಮ್ಮೆ ಚಿನ್ನ ಜಯಿಸಿದ್ದರು. ಸರ್ಬಿಯದ ನೊವಾಕ್ ಜೊಕೊವಿಕ್ ಹಾಗೂ ಸ್ಪೇನ್‌ನ ರಫೆಲ್ ನಡಾಲ್ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವುದಾಗಿ ಈಗಾಗಲೇ ಹೇಳಿದ್ದಾರೆ. ಈ ಮೂವರು ಸ್ಪರ್ಧಾತ್ಮಕ ಟೂರ್ನಿಯಲ್ಲಿ ಒಟ್ಟಿಗೆ ಆಡಿದ್ದಾರೆ. ಪ್ರಸ್ತುತ ವಿಶ್ವ ರ್ಯಾಂಕಿಂಗ್‌ನಲ್ಲಿ ಫೆಡರರ್ 3ನೇ ಸ್ಥಾನದಲ್ಲಿದ್ದು, ನಡಾಲ್ ಹಾಗೂ ಜೊಕೊವಿಕ್ ಈ ವರ್ಷದ ಎಲ್ಲ ನಾಲ್ಕು ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News