ರಸ್ತೆ ಬದಿ ಪಾನಿಪೂರಿ ಮಾರಾಟದಿಂದ ದ್ವಿಶತಕದ ತನಕ

Update: 2019-10-18 04:59 GMT

ಮುಂಬೈ, ಅ.17: ಕಠಿಣ ಪರಿಶ್ರಮಿಯಾಗಿರುವ ಈತ ಹಗಲಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಾ, ಸಂಜೆ ವೇಳೆ ಮುಂಬೈನ ಖ್ಯಾತ ಆಝಾದ್ ಮೈದಾನದಲ್ಲಿ ಪಾನಿಪೂರಿ ಮಾರುತ್ತಿದ್ದ. ರಾತ್ರಿ ಆಝಾದ್ ಮೈದಾನದ ಸಿಬ್ಬಂದಿ ನೆಲೆಸುವ ಡೇರೆಗಳಲ್ಲಿ ವಾಸಿಸುತ್ತಿದ್ದ. ಇದು ಜಾರ್ಖಂಡ್ ವಿರುದ್ಧ ವಿಜಯ ಹಝಾರೆ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿ ಹೊಸ ದಾಖಲೆ ಬರೆದ ಯಶಸ್ವಿ ಜೈಸ್ವಾಲ್ ಅವರ ಯಶೋಗಾಥೆ.

 ತನ್ನ 11ನೇ ವಯಸ್ಸಿನಲ್ಲಿ ಉತ್ತರಪ್ರದೇಶ ವಾರಾಣಸಿಯಿಂದ ತಂದೆಯ ಜೊತೆ ಮುಂಬೈಗೆ ಬಂದ ಜೈಸ್ವಾಲ್‌ಗೆ ಕ್ರಿಕೆಟಿಗನಾಗಬೇಕೆಂಬ ಬಯಕೆ ಚಿಗುರೊಡೆಯಿತು. ಕಠಿಣ ಪರಿಶ್ರಮದ ಫಲವಾಗಿ ಆರು ವರ್ಷಗಳ ಬಳಿಕ ತನ್ನ 17ನೇ ವಯಸ್ಸಿನಲ್ಲಿ 50 ಓವರ್‌ಗಳ ವಿಜಯ ಹಝಾರೆ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ವಯಸ್ಸಿನ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಜಾರ್ಖಂಡ್ ವಿರುದ್ಧ ಮುಂಬೈ ತಂಡದ ಪರ 154 ಎಸೆತಗಳಲ್ಲಿ 203 ರನ್ ಗಳಿಸಿರುವ ಜೈಸ್ವಾಲ್ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ದ್ವಿಶತಕ ಸಿಡಿಸಿದ ಕೇವಲ ಮೂರನೇ ಆಟಗಾರ. ಜೈಸ್ವಾಲ್ ವಯಸ್ಸು, ಅವರ ಹಿನ್ನೆಲೆ ಹಾಗೂ ಅದ್ಭುತ ಪ್ರತಿಭೆ ಎಲ್ಲರಿಗಿಂತ ಭಿನ್ನವಾಗಿಸಿದೆ.

 ಜೈಸ್ವಾಲ್ ಈ ವರ್ಷದ ಸ್ಪರ್ಧೆಯಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ ನಾಲ್ಕು ದಾಂಡಿಗರ ಪೈಕಿ ಒಬ್ಬರಾಗಿದ್ದಾರೆ. ಜೈಸ್ವಾಲ್‌ಗಿಂತ ಹೆಚ್ಚು ರನ್ ಗಳಿಸಿರುವ ಮೂವರು ಆಟಗಾರರು 8 ಇನಿಂಗ್ಸ್ ಗಳಲ್ಲಿ ಆಡಿದ್ದರೆ, ಜೈಸ್ವಾಲ್ ಕೇವಲ 5 ಇನಿಂಗ್ಸ್‌ಗಳಲ್ಲಿ 44, 113, 22, 122 ಹಾಗೂ 203 ರನ್ ಗಳಿಸಿದ್ದಾರೆ.

 ‘‘ದ್ವಿಶತಕ ಸಿಡಿಸಿದ ಬಳಿಕ ಹೆಲ್ಮೆಟ್ ಎತ್ತಿ ಸಂಭ್ರಮಿಸುವ ಆ ಕ್ಷಣ ಅತ್ಯಂತ ಮಧುರ. ನಾನು ಇದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದ್ದೇನೆ. ಇದು ಕೇವಲ ಆರಂಭ. ಮತ್ತಷ್ಟು ಸಾಧನೆಗೆ ಕಠಿಣ ಪರಿಶ್ರಮದ ಅಗತ್ಯವಿದೆ. ವಿಜಯ ಹಝಾರೆ ಟ್ರೋಫಿಯಲ್ಲಿ ಉತ್ತಮ ಅನುಭವ ಆಗಿದೆ. ಶ್ರೇಯಸ್ ಬಾಯ್ (ಅಯ್ಯರ್),ಸೂರ್ಯ (ಕುಮಾರ್ ಯಾದವ್) ಬಾಯ್ ಅವರಂತಹ ಉತ್ತಮ ಆಟಗಾರರೊಂದಿಗೆ ಆಡುವ ಅವಕಾಶ ಲಭಿಸಿದೆ. ಅವರೆಲ್ಲರೂ ನನ್ನ ಬಗ್ಗೆ ತುಂಬಾ ಕಾಳಜಿ ತೋರಿದ್ದಾರೆ. ಇಂತಹ ಉತ್ತಮ ವಾತಾವರಣದಲ್ಲಿ ಆಡುವ ಭಾಗ್ಯ ನನಗೆ ಲಭಿಸಿದೆ’’ ಎಂದು ಜೈಸ್ವಾಲ್ ತಿಳಿಸಿದ್ದಾರೆ.

ಜೈಸ್ವಾಲ್ ವಯೋಮಿತಿಗಳ ಟೂರ್ನಿಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ಅಂಡರ್-19 ತಂಡದ ವಿರುದ್ಧ 173 ರನ್ ಗಳಿಸಿದ್ದರು. ಅಂಡರ್-19 ಏಕದಿನ ಕ್ರಿಕೆಟ್‌ನ 13 ಪಂದ್ಯಗಳಲ್ಲಿ ಶ್ರೀಲಂಕಾ ವಿರುದ್ಧ ಒಂದು ಶತಕ ಸಹಿತ ಐದು ಅರ್ಧಶತಕ ಗಳನ್ನು ಸಿಡಿಸಿದ್ದರು. ‘‘ನನ್ನ ಹೆತ್ತವರು ಉತ್ತರಪ್ರದೇಶದ ಭದೋಹಿಯ ಸಣ್ಣ ಪಟ್ಟಣದಲ್ಲಿ ವಾಸವಾಗಿದ್ದಾರೆ. ನನ್ನ ತಂದೆಯ ಜೊತೆ ಎಳೆಯ ವಯಸ್ಸಿಗೆ ಮುಂಬೈಗೆ ಬಂದಿದ್ದೆ. ಮುಂಬೈಗೆ ಬಂದ ಬಳಿಕ ಕ್ರಿಕೆಟ್ ಆಡುವ ಬಯಕೆ ಹೆಚ್ಚಾಯಿತು. ಮುಂಬೈನಲ್ಲಿದ್ದರೆ ಸಾಮಾನ್ಯವಾಗಿ ಆಝಾದ್ ಮೈದಾನದಲ್ಲಿ ಕ್ರಿಕೆಟ್ ಆಡಬಹುದು. ನನಗೆ ಬಾಲ್ಯದಲ್ಲೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ನನ್ನ ಚಿಕ್ಕಪ್ಪ ಮುಂಬೈನಲ್ಲಿದ್ದರೂ ಅವರ ಮನೆ ಚಿಕ್ಕದಾಗಿದ್ದ ಕಾರಣ ಅಲ್ಲಿ ನೆಲೆಸಲು ಸಾಧ್ಯವಾಗದೆ ಮೈದಾನದ ಡೇರೆಗಳಲ್ಲಿ ನೆಲೆಸಲು ಶುರು ಮಾಡಿದೆ. ಆಝಾದ್ ಮೈದಾನದಲ್ಲಿ ಪಿಚ್ ಸಿದ್ಧಪಡಿಸುವ ಸಿಬ್ಬಂದಿಗಳು ಡೇರೆಯಲ್ಲಿ ವಾಸವಾಗಿರುತ್ತಾರೆ. ನಾನು ಸ್ವತಃ ಸ್ಟೌವ್‌ನಲ್ಲಿ ಅಡಿಗೆ ಮಾಡಿಕೊಂಡು ಮನೆಯವರಿಂದ ಹೆಚ್ಚು ಹಣ ಪಡೆಯದೇ ಜೀವನ ನಿರ್ವಹಿಸಿದ್ದೆ’’ಎಂದು ಕಷ್ಟದ ದಿನಗಳನ್ನು ಜೈಸ್ವಾಲ್ ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News