ಮೆದುಳಿಗೆ ತೀವ್ರ ಗಾಯ: ಅಮೆರಿಕದ ಬಾಕ್ಸರ್ ಪ್ಯಾಟ್ರಿಕ್ ಡೇ ಮೃತ್ಯು

Update: 2019-10-18 05:01 GMT

ನ್ಯೂಯಾರ್ಕ್, ಅ.17: ಬಾಕ್ಸಿಂಗ್ ಹೋರಾಟದ ವೇಳೆ ಮೆದುಳಿಗೆ ಆಗಿರುವ ಗಾಯದಿಂದಾಗಿ ಅಮೆರಿಕದ ಬಾಕ್ಸರ್ ಪ್ಯಾಟ್ರಿಕ್ ಡೇ ಬುಧವಾರ ಚಿಕಾಗೊದಲ್ಲಿ ಮೃತಪಟ್ಟಿದ್ದಾರೆ. ಶನಿವಾರ ನಡೆದ ಬಾಕ್ಸಿಂಗ್ ಫೈಟ್‌ನ 10ನೇ ಸುತ್ತಿನಲ್ಲಿ ಚಾರ್ಲ್ಸ್ ಕಾನ್‌ವೆಲ್‌ಗೆ ಸೋತಿದ್ದರು. ಬಾಕ್ಸಿಂಗ್‌ನ ವೇಳೆ ಕಾನ್‌ವೆಲ್ ನೀಡಿದ ಬಲಿಷ್ಠ ಪಂಚ್‌ಗಳಿಗೆ ಪ್ಯಾಟ್ರಿಕ್ ಮೆದುಳಿಗೆ ತೀವ್ರತರನಾದ ಗಾಯವಾಗಿದ್ದು, ಕುಸಿದು ಬಿದ್ದಿದ್ದ ಅವರನ್ನು ಸ್ಟ್ರಚರ್‌ನ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಾಕ್ಸಿಂಗ್‌ನಲ್ಲಿ ಸೋತ ಬಳಿಕ ಮೆದುಳು ಗಾಯಕ್ಕೊಳಗಾಗಿದ್ದ 27ರ ವಯಸ್ಸಿನ ಪ್ಯಾಟ್ರಿಕ್ ನಾಲ್ಕು ದಿನಗಳ ಕಾಲ ಕೋಮಾದಲ್ಲಿದ್ದರು. ನಾರ್ತ್ ವೆಸ್ಟರ್ನ್ ಮೆಮೋರಿಯಲ್ ಹಾಸ್ಪಿಟಲ್‌ನಲ್ಲಿ ತುರ್ತು ಮೆದುಳು ಶಸ್ತ್ರಚಿಕಿತ್ಸೆ ನಡೆಸಿದ್ದರೂ ಜೂನಿಯರ್ ಮಿಡ್ಲ್‌ವೇಟ್ ಬಾಕ್ಸರ್‌ನ್ನು ಬದುಕಿಸಲು ವೈದ್ಯರಿಂದ ಸಾಧ್ಯವಾಗಲಿಲ್ಲ. ‘‘ಚಿಕಾಗೊದ ವಿಂಟ್‌ಟ್ರಸ್ಟ್ ಅರೆನಾದಲ್ಲಿ ಶನಿವಾದ ನಡೆದ ಬಾಕ್ಸಿಂಗ್ ಹೋರಾಟದಲ್ಲಿ ಪ್ಯಾಟ್ರಿಕ್ ಮೆದುಳಿಗೆ ಪೆಟ್ಟಾಗಿತ್ತು. ಈ ಪೆಟ್ಟಿನಿಂದಾಗಿಯೇ ಅವರು ಅ.16ರಂದು ನಿಧನರಾಗಿದ್ದಾರೆ’’ ಎಂದು ಆಯೋಜಕರು ತಿಳಿಸಿದ್ದಾರೆ.

  ಕಳೆದ ಜುಲೈನ ಬಳಿಕ ಗಾಯಗೊಂಡು ಮೃತಪಟ್ಟಿರುವ ಮೂರನೇ ವೃತ್ತಿಪರ ಬಾಕ್ಸರ್ ಪ್ಯಾಟ್ರಿಕ್. ಜುಲೈನಲ್ಲಿ ಅರ್ಜೆಂಟೀನದ ಸೂಪರ್ ಲೈಟ್ ವೇಟ್ ಬಾಕ್ಸರ್ ಹ್ಯೂಗೊ ಸ್ಯಾಂಟಿಲನ್ ಹಾಗೂ ರಶ್ಯದ 28ರ ಹರೆಯದ ಮ್ಯಾಕ್ಸಿಂ ದಾದಾಶೆವ್ ಬಾಕ್ಸಿಂಗ್ ಪಂಚ್‌ಗೆ ತೀವ್ರ ಪೆಟ್ಟು ತಿಂದು ಮೃತಪಟ್ಟಿದ್ದರು.

 ವೃತ್ತಿಪರ ಬಾಕ್ಸರ್ ಆಗುವ ಮೊದಲು ಪ್ಯಾಟ್ರಿಕ್ ಅಮೆಚೂರ್ ಬಾಕ್ಸರ್ ಆಗಿ ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. 2013ರಲ್ಲಿ ವೃತ್ತಿಪರ ಬಾಕ್ಸರ್ ಆಗಿ ಪರಿವರ್ತಿತರಾಗಿದ್ದ ಪ್ಯಾಟ್ರಿಕ್ ವಿಶ್ವದರ್ಜೆ ಸೂಪರ್ ವೆಲ್ಟರ್‌ವೇಟ್ ಸ್ಪರ್ಧಿಯಾಗಿ ಹೊರಹೊಮ್ಮಿದ್ದು, 2017ರಲ್ಲಿ ಡಬ್ಲುಬಿಸಿ ಕಾಂಟಿನೆಂಟಲ್ ಅಮೆರಿಕ ಚಾಂಪಿಯನ್‌ಶಿಪ್ ಹಾಗೂ 2019ರಲ್ಲಿ ಐಬಿಎಫ್ ಇಂಟರ್‌ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನಲ್ಲಿ ಜಯಶಾಲಿಯಾಗಿದ್ದರು. ಜೂನ್‌ನಲ್ಲಿ ಡಬ್ಲುಬಿಸಿ ಹಾಗೂ ಐಬಿಎಫ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News