ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕ ಉತ್ಪನ್ನಗಳ ಬೇಡಿಕೆ ತೀವ್ರ ಕುಸಿತ

Update: 2019-10-18 17:06 GMT

ಹೊಸದಿಲ್ಲಿ,ನ.19: ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಖರೀದಿ ದರವು ಕಳೆದ ಏಳು ವರ್ಷಗಳಲ್ಲೇ ಅತ್ಯಂತ ಕನಿಷ್ಠವೆಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ನಿಲ್ಸೆನ್ ವರದಿಯು ಬಹಿರಂಗಪಡಿಸಿರುವುದಾಗಿ ‘ದಿ ಮಿಂಟ್’ ಸುದ್ದಿ ಜಾಲತಾಣ ವರದಿ ಮಾಡಿದೆ.

ಸೆಪ್ಟೆಂಬರ್‌ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಸಾಮಗ್ರಿಗಳು(ಎಫ್‌ಎಂಸಿಜಿ) ಶೇ 3.9ರಷ್ಟು ಏರಿಕೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 13.9ರಷ್ಟು ಏರಿಕೆಯಾಗಿತ್ತು. ಗ್ರಾಮೀಣ ಭಾರತದಲ್ಲಿ ಮೌಲ್ಯಯುತ ಬೆಳವಣಿಗೆಯ ಶೇ.5ರಷ್ಟು ಕುಸಿದಿದೆ.

 ಗ್ರಾಮೀಣ ಪ್ರದೇಶಗಳಲ್ಲಿ ಖರೀದಿ ದರವು ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿನ ಖರೀದಿ ದರಕ್ಕಿಂತ ಹೆಚ್ಚು ವೇಗವಾಗಿ ಬೆಳೆಯುತ್ತದೆ. ಆದರೆ ಪ್ರಸಕ್ತ ತ್ರೈಮಾಸಿಕದಲ್ಲಿ ಈ ಪ್ರವೃತ್ತಿಯು ತಿರುವುಮುರುವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ತ್ವರಿತ ಮಾರಾಟದ ಗ್ರಾಹಕ ಸಾಮಾಗ್ರಿಗಳ ಮೌಲ್ಯಯುತ ಬೆಳವಣಿಗೆಯು ಶೇ.14ರಿಂದ ಶೇ.8ಕ್ಕೆ ಕುಸಿದಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಖರೀದಿ ಬೆಳವಣಿಗೆಯು ಕಳೆದ ಏಳು ವರ್ಷಗಳಲ್ಲಿಯೇ ಅತ್ಯಂತ ಕೆಳಕ್ಕೆ ಕುಸಿದಿರುವುದಾಗಿ ನಿಲ್ಸೆನ್ ಸಂಸ್ಥೆಯ ದಕ್ಷಿಣ ಏಶ್ಯಕ್ಕಾಗಿನ ರಿಟೇಲ್ ಮಾಪನ ಸೇವೆಗಳ ವರಿಷ್ಠ ಸುನೀಲ್ ಖಿಯಾನಿ ತಿಳಿಸಿದ್ದಾರೆ.

‘‘ಕಳೆದ 6-7 ವರ್ಷಗಳಿಂದ ಗ್ರಾಮೀಣ ಎಫ್‌ಎಂಸಿಜಿ ವಲಯವು ಎರಡು ಅಂಕಿಗಳ ಬೆಳವಣಿಗೆಯನ್ನೇ ಕಾಣುತ್ತಾ ಬಂದಿತ್ತು. ಆದರೆ ಈ ಬಾರಿ ಇಷ್ಟೊಂದು ಹಿಂಜರಿತ ಉಂಟಾಗಿರುವುದು,ಜನರಲ್ಲಿ ಬಹಳಷ್ಟು ಆಘಾತವುಂಟು ಮಾಡಿದೆ ’’ ಎಂದು ಕ್ಯಾಂಟರ್‌ ವರ್ಲ್ಡ್ ಪ್ಯಾನೆಲ್ ಸಂಸ್ಥೆಯ ದಕ್ಷಿಣ ಏಶ್ಯ ವಿಭಾಗದ ಆಡಳಿತ ನಿರ್ದೇಶಕ ಕೆ. ರಾಮಕೃಷ್ಣನ್ ತಿಳಿಸಿದ್ದಾರೆ.

   ಈ ಹಿಂಜರಿತವು ದಕ್ಷಿಣ ಭಾರತಕ್ಕಿಂತಲೂ ಉತ್ತರ ಭಾರತದಲ್ಲಿ ಅತ್ಯಂತ ತೀವ್ರವಾಗಿದೆ. ಉತ್ತರ ಭಾರತದಲ್ಲಿ ಎಫ್‌ಎಂಸಿಜಿಯ ಮೌಲ್ಯಯುತ ಬೆಳವಣಿಗೆಯು ಶೇ.20ರಿಂದ ಶೇ.6ಕ್ಕೆ ಕುಸಿದಿದ್ದರೆ, ದಕ್ಷಿಣ ಭಾರತದಲ್ಲಿ ಅದು ಶೇ. 12ರಲ್ಲಿ ಉಳಿದುಕೊಂಡಿದೆಯೆಂದು ನೆಲ್ಸನ್ ಸಮೀಕ್ಷೆ ತಿಳಿಸಿದೆ.

 ಕಳವಳಕರವೆಂಬಂತೆ, ಆಹಾರ ಉತ್ಪನ್ನಗಳ ಬೇಡಿಕೆಯ ದರವು ಶೇ. 21ರಿಂದ ಶೇ.7ಕ್ಕೆ ಕುಸಿದಿದೆ. ನಗದು ಹರವಿನ ಕೊರತೆಯು ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಕುಂಠತಗೊಳ್ಳುವಂತೆ ಮಾಡಿದೆ ಎಂದು ಭಾರತದ ಅತಿ ದೊಡ್ಡ ಗ್ರಾಹಕ ಸಾಮಾಗ್ರಿಗಳ ಉತ್ಪಾದಕ ಸಂಸ್ಥೆಯಾದ ಹಿಂದೂಸ್ತಾನ್ ಲಿವರ್ ತಿಳಿಸಿರುವುದಾಗಿ ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News