3ನೇ ಟೆಸ್ಟ್: ಕ್ಲೀನ್ಸ್ವೀಪ್ ಸಾಧಿಸುವತ್ತ ಭಾರತ ಚಿತ್ತ

Update: 2019-10-19 05:09 GMT

ರಾಂಚಿ, ಅ.18: ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಶನಿವಾರ ಇಲ್ಲಿ ಆರಂಭವಾಗಲಿದ್ದು, ಈಗಾಗಲೇ ಮೊದಲೆರಡು ಪಂದ್ಯಗಳನ್ನು ಜಯಿಸಿ ಸರಣಿ ಗೆದ್ದುಕೊಂಡಿರುವ ಭಾರತ 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸುವತ್ತ ಚಿತ್ತವಿರಿಸಿದೆ.

ಭಾರತ ಒಂದು ವೇಳೆ 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿದರೆ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಅಮೂಲ್ಯ 40 ಅಂಕ ಪಡೆಯಲಿದೆ.

ಹರಿಣ ಪಡೆ ವಿರುದ್ಧ ಎಲ್ಲ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿರುವ ಭಾರತ ವಿಶಾಖಪಟ್ಟಣದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು 203 ರನ್‌ಗಳಿಂದ ಗೆದ್ದುಕೊಂಡಿದೆ. ಪುಣೆಯಲ್ಲಿ ನಡೆದ ಎರಡನೇ ಪಂದ್ಯವನ್ನು ಇನಿಂಗ್ಸ್ ಹಾಗೂ 137 ರನ್‌ಗಳ ಅಂತರದಿಂದ ಜಯಿಸಿ ಫ್ರೀಡಂ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 4 ಪಂದ್ಯಗಳಲ್ಲಿ 200 ಅಂಕವನ್ನು ಗಳಿಸಿದೆ. ಸಮೀಪ ಎದುರಾಳಿ ನ್ಯೂಝಿಲ್ಯಾಂಡ್ ಹಾಗೂ ಶ್ರೀಲಂಕಾ ತಂಡಗಳಿಗಿಂತ 140 ಅಂಕ ಮುನ್ನಡೆಯಲ್ಲಿದೆ. ಅಂತಿಮ ಟೆಸ್ಟ್‌ನಲ್ಲಿ ಭಾರತ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲಿದ್ದು, ಗೆಲುವಿನ ವೇಗ ಹೆಚ್ಚಿಸಲಿದೆ ಎಂದು ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ರಾಂಚಿ ಟೆಸ್ಟ್‌ನಲ್ಲಿ ಭಾರತ ಬ್ಯಾಟಿಂಗ್ ಇಲ್ಲವೇ ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಸಮಸ್ಯೆ ಎದುರಿಸುತ್ತಿಲ್ಲ. ಆತಿಥೇಯ ತಂಡದ ಅಗ್ರ ಸರದಿಯ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆರಂಭಿಕ ಆಟಗಾರನಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಆಡಿದ್ದ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ಅವಳಿ ಶತಕ ಸಿಡಿಸಿ ದ.ಆಫ್ರಿಕಾದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದ್ದರು. ಮುಂಬೈಕರ್ ರೋಹಿತ್ ಅವರ ಆರಂಭಿಕ ಜೊತೆಗಾರ ಮಾಯಾಂಕ್ ಅಗರ್ವಾಲ್ ತನ್ನ ಚೊಚ್ಚಲ ಶತಕವನ್ನು ದ್ವಿಶತಕವಾಗಿ ಪರಿವರ್ತಿಸುವಲ್ಲಿ ಯಶ ಕಂಡಿದ್ದರು. ನಾಯಕ ‘ಕಿಂಗ್ ಕೊಹ್ಲಿ’ ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಜೀವನಶ್ರೇಷ್ಠ ಔಟಾಗದೆ 254 ರನ್ ಗಳಿಸಿದ್ದರು. ಪುಣೆ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾಗಿರುವ ರೋಹಿತ್ ಇದೀಗ ಮತ್ತೊಂದು ದೊಡ್ಡ ಸ್ಕೋರ್ ಮೇಲೆ ಕಣ್ಣಿಟ್ಟಿದ್ದಾರೆ. ಗುಜರಾತ್ ಬ್ಯಾಟ್ ್ಸಮನ್ ಚೇತೇಶ್ವರ ಪೂಜಾರ ಸರಣಿಯಲ್ಲಿ ಎರಡು ಬಾರಿ ಅರ್ಧಶತಕ ಸಿಡಿಸಿದ್ದಾರೆ. ಮೂರನೇ ಟೆಸ್ಟ್‌ನಲ್ಲಿ ಮೂರಂಕೆಯ ಮೇಲೆ ಕಣ್ಣಿಟ್ಟಿದ್ದಾರೆ.

 ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಎರಡು ಟೆಸ್ಟ್ ಪಂದ್ಯಗಳಲ್ಲಿ ಕೇವಲ 16 ಟೆಸ್ಟ್ ವಿಕೆಟ್‌ಗಳನ್ನು ಕಳೆೆದುಕೊಂಡಿದೆ. ಕಳೆದೆರಡು ಪಂದ್ಯಗಳಲ್ಲಿ ಟಾಸ್ ಭಾರತದ ಮೇಲೆ ಕರುಣೆ ತೋರಿತ್ತು. ಅಂತಿಮ ಟೆಸ್ಟ್‌ನಲ್ಲಿ ಯಾರಿಗೆ ಟಾಸ್ ಒಲಿಯಲಿದೆ ಎಂದು ಕಾದುನೋಡಬೇಕಾಗಿದೆ.

 ವೇಗದ ಬೌಲರ್ ಉಮೇಶ್ ಯಾದವ್ ಪುಣೆ ಟೆಸ್ಟ್‌ನಲ್ಲಿ 22 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿ ಟೀಮ್ ಇಂಡಿಯಾಕ್ಕೆ ಉತ್ತಮ ಪುನರಾಗಮನ ಮಾಡಿದ್ದಾರೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಕೆಲವು ಉಸಿರುಬಿಗಿಹಿಡಿಯುವಂತಹ ಕ್ಯಾಚ್ ಪಡೆದು ವೇಗದ ಬೌಲರ್‌ಗಳಿಗೆ ವಿಕೆಟ್ ಸಿಗಲು ನೆರವಾಗಿದ್ದಾರೆ. ಪುಣೆ ಟೆಸ್ಟ್‌ನಲ್ಲಿ ಆಲ್‌ರೌಂಡರ್ ಹನುಮ ವಿಹಾರಿಗೆ ವಿಶ್ರಾಂತಿ ನೀಡಿದ್ದ ನಾಯಕ ಕೊಹ್ಲಿ ಹೆಚ್ಚುವರಿ ವೇಗಿ ಉಮೇಶ ಯಾದವ್‌ರನ್ನು ಕಣಕ್ಕಿಳಿಸಿದ್ದರು. ಅಂತಿಮ ಟೆಸ್ಟ್‌ನಲ್ಲಿ ಯಾವ ಕಾಂಬಿನೇಶನ್ ಆಯ್ಕೆ ಮಾಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.

ದಕ್ಷಿಣ ಆಫ್ರಿಕಾದ ನಾಯಕ ಎಫ್‌ಡು ಪ್ಲೆಸಿಸ್ ರಾಂಚಿ ಪಿಚ್ ಸ್ಪಿನ್ನರ್‌ಗಳಿಗೆ ಒಪ್ಪುವಂತಿದೆ ಎಂದು ಹೇಳಿದ್ದಾರೆ. ಪ್ಲೆಸಿಸ್ ಮಾತು ನಿಜವಾದರೆ ಭಾರತ ಕುಲದೀಪ ಯಾದವ್‌ರನ್ನು ಮೂರನೇ ಸ್ಪಿನ್ನರ್ ಆಗಿ ಕಣಕ್ಕಿಳಿಸಬಹುದು.

  ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ವಿಶಾಖಪಟ್ಟಣದಲ್ಲಿ ಒಂದಷ್ಟು ಹೋರಾಟ ನೀಡಿದ್ದರು. ಆದರೆ, ಪುಣೆಯಲ್ಲಿ ಮಾತ್ರ ದಯನೀಯ ವೈಫಲ್ಯ ಕಂಡಿದ್ದಾರೆ. ಬಾಲಂಗೋಚಿಗಳು ತಂಡದ ಪರ ಹೋರಾಟ ನೀಡಿ ಭಾರತದ ಬೌಲರ್‌ಗಳನ್ನು ಹತಾಶರನ್ನಾಗಿ ಮಾಡಿದ್ದರು. ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಿ ಎಂದು ಡಿಯನ್ ಎಲ್ಗರ್, ಕ್ವಿಂಟನ್ ಡಿಕಾಕ್ ಹಾಗೂ ಟೆಂಬಾ ಬವುಮಾ ಅವರಿಗೆ ಡು ಪ್ಲೆಸಿಸ್ ವಿನಂತಿಸಿದ್ದಾರೆ.

ಆರಂಭಿಕ ಆಟಗಾರ ಏಡೆನ್ ಮರ್ಕರಮ್ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ವಿಭಾಗ ಮತ್ತಷ್ಟು ಸೊರಗಿದೆ. ಮರ್ಕರಮ್ ಮಣಿಕಟ್ಟಿನ ಗಾಯದಿಂದ ಮೂರನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ.

 ಕಾಗಿಸೊ ರಬಾಡ, ವೆರ್ನೊನ್ ಫಿಲ್ಯಾಂಡರ್ ಹಾಗೂ ಅನ್ರಿಚ್ ನೊರ್ಟ್ಜೆ ಅವರನ್ನೊಳಗೊಂಡ ದ.ಆಫ್ರಿಕದ ವೇಗದ ಬೌಲಿಂಗ್ ದಾಳಿ ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿಯಾಗಿರಲಿಲ್ಲ. ಹಿರಿಯ ಸ್ಪಿನ್ನರ್ ಕೇಶವ ಮಹಾರಾಜ್ ಕೂಡ ಭುಜನೋವಿನಿಂದಾಗಿ ಮೂರನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ಬ್ಯಾಟಿಂಗ್ ಸರದಿ ಸಹಿತ ಹಲವು ಬದಲಾವಣೆ ಮಾಡಲಿದೆ ಎಂದು ನಾಯಕ ಪ್ಲೆಸಿಸ್ ತಿಳಿಸಿದ್ದಾರೆ. ಮರ್ಕರ ಮ್ ಬದಲಿಗೆ ಝುಬರ್ ಹಂಝಾ ಅವಕಾಶ ಪಡೆಯಲಿದ್ದಾರೆ. ಮೊದಲ ಟೆಸ್ಟ್‌ನಂತೆಯೇ ಮೂವರು ಸ್ಪಿನ್ನರ್‌ಗಳನ್ನು ಆಡಿಸಬೇಕೋ, ಅಥವಾ ನೊರ್ಟ್ಜೆ ಜಾಗಕ್ಕೆ ಲುಂಗಿ ಗಿಡಿ ಅವರನ್ನು ಆಡಿಸಬೇಕೇ ಎಂಬ ಗೊಂದಲದಲ್ಲಿದ್ದಾರೆ ಪ್ಲೆಸಿಸ್.

ಪಂದ್ಯದ ಸಮಯ ಬೆಳಗ್ಗೆ 9:30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News