ದಕ್ಷಿಣ ಆಪ್ರಿಕಾದ ಮಾಜಿ ಕ್ರಿಕೆಟಿಗ ಗುಲಾಂ ಬೋದಿಗೆ 5 ವರ್ಷ ಜೈಲು

Update: 2019-10-19 05:23 GMT

ಜೋಹಾನ್ಸ್‌ಬರ್ಗ್, ಅ.18: ದಕ್ಷಿಣ ಆಫ್ರಿಕಾದ ದೇಶೀಯ ಕ್ರಿಕೆಟ್‌ನಲ್ಲಿ 2015ರಲ್ಲಿ ಬೆಳಕಿಗೆ ಬಂದಿರುವ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಭಾರತ ಮೂಲದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಗುಲಾಂ ಬೋದಿ ಶುಕ್ರವಾರ ಐದು ವರ್ಷಗಳ ಜೈಲು ಸಜೆಗೆ ತುತ್ತಾಗಿದ್ದಾರೆ.

 2004ರ ಭ್ರಷ್ಟಾಚಾರ ಚಟುವಟಿಕೆ ತಡೆ ಕಾಯ್ದೆ ಅನ್ವಯ ಪ್ರಿಟೋರಿಯ ಕಮರ್ಶಿಯಲ್ ಕ್ರೈಮ್ ಕೋರ್ಟ್ ಬೋದಿಗೆ ಜೈಲು ಶಿಕ್ಷೆ ವಿಧಿಸಿದೆ. ಈ ಕಾಯ್ದೆ ಅಡಿ ಜೈಲು ಪಾಲಾಗಿರುವ ದಕ್ಷಿಣ ಆಫ್ರಿಕಾದ ಮೊದಲ ಕ್ರೀಡಾಪಟು ಬೋದಿ. 2000ರಲ್ಲಿ ಹ್ಯಾನ್ಸಿ ಕ್ರೋನಿಯೆ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ಹಾಕಿಕೊಂಡ ಬಳಿಕ ದ.ಆಫ್ರಿಕಾದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು.

ದೇಶೀಯ ಕ್ರಿಕೆಟ್‌ನಲ್ಲಿನ ಮ್ಯಾಚ್-ಫಿಕ್ಸಿಂಗ್ ಪ್ರಕರಣ ದಕ್ಷಿಣ ಆಫ್ರಿಕಾದಲ್ಲಿ ಪ್ರಮುಖ ಪ್ರಕರಣವಾಗಿ ಪರಿಗಣಿಸಲ್ಪಟ್ಟಿತ್ತು. 2015ರ ರ್ಯಾಮ್‌ಸ್ಲಾಮ್ ಟ್ವೆಂಟಿ-20 ಚಾಲೆಂಜ್ ಸೀರೀಸ್‌ನಲ್ಲಿ ಪಂದ್ಯವನ್ನು ಫಿಕ್ಸ್ ಮಾಡಿದ ಅಥವಾ ಅನುಚಿತವಾಗಿ ಪ್ರಭಾವಬೀರಿದ ಆರೋಪದಲ್ಲಿ ಬೋದಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಭ್ರಷ್ಟಾಚಾರ ಕಾಯ್ದೆ ಅಡಿ ಆರೋಪಕ್ಕೆ ಒಳಗಾಗಿದ್ದರು.

    ಬೋದಿ ಗುಜರಾತ್‌ನ ಹಥುರನ್‌ನಲ್ಲಿ ಜನಿಸಿದ್ದರು. ಬೋದಿ ಕುಟುಂಬ ಸದಸ್ಯರು ದಕ್ಷಿಣ ಆಫ್ರಿಕಾಕ್ಕೆ ವಲಸೆ ಹೋದಾಗ ಬೋದಿ ಹದಿ ಹರೆಯದವರಾಗಿದ್ದರು. 40ರ ವಯಸ್ಸಿನ ಬೋದಿ ದ.ಆಫ್ರಿಕಾದ ಪರ 2 ಏಕದಿನ ಹಾಗೂ 1 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದು, 2012ರಲ್ಲಿ ಐಪಿಎಲ್‌ನ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲ್ಲಿದ್ದರು. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದ ಬೋದಿ ಶಿಕ್ಷೆಯನ್ನು ಕಡಿಮೆ ಮಾಡುವಂತೆ ಅಂಗಲಾಚಿದ್ದರು. ಬೋದಿ ವಿರುದ್ಧ ಶಿಕ್ಷೆ ಘೋಷಣೆ ವಿಳಂಬವಾಗಿದ್ದು, ಬೋದಿ ಬಳಿ ಹಣವಿಲ್ಲದ ಕಾರಣ ಒಂದು ಹಂತದಲ್ಲಿ ಅವರ ವಕೀಲರು ವಿಚಾರಣೆಯಿಂದ ಹಿಂದೆ ಸರಿದಿದ್ದರು.ಅಂತಿಮವಾಗಿ ಶುಕ್ರವಾರ ನ್ಯಾಯಾಲಯ ತೀರ್ಪು ನ ಈಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News