2018ರಲ್ಲಿ ಭಾರತದಲ್ಲಿ ಐದು ವರ್ಷಕ್ಕಿಂತ ಕಡಿಮೆ ಪ್ರಾಯದ 8.8 ಲಕ್ಷ ಮಕ್ಕಳ ಸಾವು: ಯುನಿಸೆಫ್ ವರದಿ

Update: 2019-10-19 08:22 GMT

ಹೊಸದಿಲ್ಲಿ, ಅ.18: ವಿಶ್ವದಲ್ಲಿ ಐದು ವರ್ಷಕ್ಕಿಂತ ಕಡಿಮೆ ಪ್ರಾಯದ ಅತ್ಯಂತ ಹೆಚ್ಚಿನ ಮಕ್ಕಳ ಸಾವುಗಳು ಭಾರತದಲ್ಲಿಯೇ ಸಂಭವಿಸುತ್ತಿವೆ. ದೇಶದಲ್ಲಿ ಐದಕ್ಕಿಂತ ಕಡಿಮೆ ಪ್ರಾಯದ ಪ್ರತಿ ಸಾವಿರ ಮಕ್ಕಳಲ್ಲಿ 37 ಮಕ್ಕಳು ಸಾಯುತ್ತಾರೆ. ಈ ಸರಾಸರಿ ಪ್ರಮಾಣ ಪಾಕಿಸ್ತಾನ (69) ಮತ್ತು ನೈಜೀರಿಯಾ (120)ಕ್ಕಿಂತ ಕಡಿಮೆಯಿದೆ. ಆದರೆ ಸಂಖ್ಯೆಯ ದೃಷ್ಟಿಯಿಂದ ವಿಶ್ವದಲ್ಲಿ ಈ ವಯೋಗುಂಪಿನ ಅತ್ಯಂತ ಹೆಚ್ಚು ಮಕ್ಕಳ ಸಾವು ಭಾರತದಲ್ಲಿಯೇ ಸಂಭವಿಸುತ್ತಿವೆ. 2018ರಲ್ಲಿ ಹೀಗೆ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 8.8 ಲಕ್ಷ ಆಗಿತ್ತು.

ಯುನಿಸೆಫ್ ನ ವಿಶ್ವದ ಮಕ್ಕಳ ಸ್ಥಿತಿ-2019 ವರದಿಯು ಬಹಿರಂಗಗೊಳಿಸಿರುವ ಈ ಅಂಕಿಅಂಶಗಳು ಮಕ್ಕಳ ಜಾಗತಿಕ ಆರೋಗ್ಯದ ಪೇಲವ ಚಿತ್ರಣವನ್ನು ನೀಡುತ್ತಿವೆ ಮತ್ತು ಪ್ರತಿ ಮೂವರು ಮಕ್ಕಳಲ್ಲಿ ಓರ್ವ ಕುಪೋಷಣೆಯಿಂದಾಗಿ ಕುಬ್ಜತೆಯಂತಹ ದೈಹಿಕ ನ್ಯೂನತೆಗಳಿಗೆ ಗುರಿಯಾಗುತ್ತಾನೆ/ಳೆ ಎಂಬ ಸಂಕೇತವನ್ನು ನೀಡಿವೆ.

ಅಗತ್ಯ ಪೋಷಕಾಂಶಗಳ ಕೊರತೆಯಿಂದಾಗಿ ಪ್ರತಿ ಇಬ್ಬರು ಮಕ್ಕಳಲ್ಲಿ ಒಂದು ಮಗು ಸುಪ್ತ ಹಸಿವಿನಿಂದ ಬಳಲುತ್ತಿರುತ್ತದೆ. ಭಾರತದಲ್ಲಿ 2022ರ ವೇಳೆಗೆ ಕುಪೋಷಣೆಯನ್ನು ಸಂಪೂರ್ಣವಾಗಿ ನಿವಾರಿಸುವ ಗುರಿಯೊಂದಿಗೆ ಚಾಲನೆ ನೀಡಲಾಗಿರುವ ಸರಕಾರದ ಮಹತ್ವಾಕಾಂಕ್ಷೆಯ ಪೋಷಣ ಅಭಿಯಾನ ಯೋಜನೆಗೆ ಹಣಕಾಸು ಹೂಡಿಕೆಯನ್ನು ಪರಿಗಣಿಸಿದರೆ ಈ ಅಂಕಿಅಂಶಗಳು ನಿರುತ್ತೇಜಕವಾಗಿವೆ. ಸರಕಾರವು ಮೂರು ವರ್ಷಗಳ ಅವಧಿಗೆ (2018-2022) ಈ ಯೋಜನೆಗೆ 9,000 ಕೋ.ರೂ.ಗಳನ್ನು ಒದಗಿಸಿದೆ.

ಭಾರತವನ್ನು 102ನೇ ಸ್ಥಾನದಲ್ಲಿರಿಸಿರುವ ಜಾಗತಿಕ ಹಸಿವು ಸೂಚಿಯ ಬೆನ್ನಲ್ಲೇ ಯುನಿಸೆಫ್ ನ ಈ ವರದಿ ಬಿಡುಗಡೆಗೊಂಡಿದೆ. ಕುಪೋಷಣೆಯು ಗಂಭೀರ ಸಮಸ್ಯೆಯಾಗಿದೆ ಎಂದಿರುವ ವರದಿಯು, ಐದು ವರ್ಷಕ್ಕೂ ಕೆಳಗಿನ ಪ್ರತಿ ಐವರು ಮಕ್ಕಳ ಪೈಕಿ ಒಂದು ಮಗು ವಿಟಾಮಿನ್ ಎ ಕೊರತೆಯಿಂದ ಬಳಲುತ್ತಿದ್ದರೆ, ಪ್ರತಿ ಮೂವರು ಮಕ್ಕಳಲ್ಲಿ ಒಂದು ಮಗು ಬಿ12 ವಿಟಾಮಿನ್ ಕೊರತೆಯಿದ ಬಳಲುತ್ತಿದೆ ಎಂದು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News