ಕಡಿಮೆ ವೆಚ್ಚದಲ್ಲಿ ಪವಿತ್ರ ಉಮ್ರಾ, ಹಜ್ ಯಾತ್ರೆ: ವಂಚಕ ಟೂರ್ ಆಪರೇಟರ್‌ಗಳ ಬಗ್ಗೆ ಜನ ಜಾಗೃತಿ ಅಗತ್ಯ

Update: 2019-10-19 12:44 GMT

ಬೆಂಗಳೂರು, ಅ.19: ಕಡಿಮೆ ವೆಚ್ಚದಲ್ಲಿ ಪವಿತ್ರ ಉಮ್ರಾ ಹಾಗೂ ಹಜ್ ಯಾತ್ರೆಗೆ ಕರೆದೊಯ್ಯುವುದಾಗಿ ಬಡವರು ಹಾಗೂ ಮಧ್ಯಮ ವರ್ಗದವರಿಂದ ಹಣ ಪಡೆದುಕೊಂಡು ವಂಚಿಸುವಂತಹ ಟೂರ್ ಆಪರೇಟರ್‌ಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ರಾಜ್ಯ ಹಜ್ ಆಯೋಜಕರ ಸಂಘಟನೆಯ ಮುಖ್ಯಸ್ಥ ಇಕ್ಬಾಲ್ ಅಹ್ಮದ್ ಸಿದ್ದೀಖಿ ಹೇಳಿದರು.

ಶನಿವಾರ ನಗರದ ಬಾಗಲೂರು ರಸ್ತೆಯಲ್ಲಿರುವ ಸಿದ್ದೀಖಿ ಫಾರ್ಮ್‌ಹೌಸ್‌ನಲ್ಲಿ ಆಯೋಜಿಸಿದ್ದ ರಾಜ್ಯ ಹಜ್ ಆಯೋಜಕರ ಸಂಘಟನೆಯ 7ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಳೆದ 10 ವರ್ಷಗಳಿಂದ ಇಂತಹ ವಂಚನೆಯ ಪ್ರಕರಣಗಳು ಕೇಳಿ ಬರುತ್ತಿವೆ. ಇದರಿಂದಾಗಿ, ಇನ್ನುಳಿದ ಖಾಸಗಿ ಟೂರ್ ಆಪರೇಟರ್‌ಗಳ ಮೇಲೂ ಗಂಭೀರವಾದ ಪರಿಣಾಮಗಳು ಬೀರುತ್ತಿವೆ. ಜನರಿಂದ ದುಡ್ಡು ಕಟ್ಟಿಸಿಕೊಂಡು ಅವರನ್ನು ವಿಮಾನ ನಿಲ್ದಾಣ, ಮಕ್ಕಾ ಅಥವಾ ಮದೀನಾ ಬಳಿ ಬಿಟ್ಟು ಪರಾರಿಯಾಗುವಂತಹ ಘಟನೆಗಳು ನಮ್ಮ ಮುಂದಿವೆ ಎಂದು ಅವರು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೊಸದಾಗಿ ಖಾಸಗಿ ಟೂರ್ ಅಂಡ್ ಟ್ರಾವೆಲ್ಸ್ ಆರಂಭಿಸುವವರ ನೋಂದಣಿ ಮಾಡಿಸಬೇಕು. ನಿರ್ದಿಷ್ಟವಾದ ನಿಯಮಾವಳಿಗಳನ್ನು ರಚಿಸಬೇಕು. ಇದರಿಂದ, ಬಡವರನ್ನು ಲೂಟಿ ಮಾಡುವವರಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಇಕ್ಬಾಲ್ ಅಹ್ಮದ್ ಸಿದ್ದೀಖಿ ತಿಳಿಸಿದರು.

ಕೇಂದ್ರೀಯ ಹಜ್ ಸಮಿತಿಗೆ ಹಂಚಿಕೆಯಾಗುವ ಕೋಟಾ ಹಾಗೂ ಖಾಸಗಿ ಟೂರ್ ಆಪರೇಟರ್‌ಗಳಿಗೆ ಹಂಚಿಕೆಯಾಗುವ ಕೋಟಾದಲ್ಲಿ ವ್ಯತ್ಯಾಸವಿದೆ. ಅಲ್ಲದೇ, ಯಾತ್ರೆಗಾಗಿ ಹಜ್ ಸಮಿತಿ ಹಾಗೂ ಖಾಸಗಿ ಟೂರ್ ಆಪರೇಟರ್‌ಗಳು ಸಂಗ್ರಹಿಸುವ ಮೊತ್ತದಲ್ಲೂ ಸಾಕಷ್ಟು ವ್ಯತ್ಯಾಸವಿದೆ ಎಂದು ಅವರು ಹೇಳಿದರು.

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಜ್ ಸಬ್ಸಿಡಿಯನ್ನು ಹಿಂದಕ್ಕೆ ಪಡೆದ ಬಳಿಕ ಖಾಸಗಿ ಟೂರ್ ಆಪರೇಟರ್‌ಗಳ ಪಾತ್ರ ಹೆಚ್ಚಾಗಿದೆ. ಕೆಲವರು ಮಾಡುವ ವಂಚನೆಯಿಂದಾಗಿ ಎಲ್ಲರಿಗೂ ಸಮಸ್ಯೆ ಉಂಟಾಗುತ್ತದೆ ಎಂದು ಇಕ್ಬಾಲ್ ಅಹ್ಮದ್ ಸಿದ್ದೀಖಿ ತಿಳಿಸಿದರು.

ಸಂಘಟನೆಯ ಕಾರ್ಯದರ್ಶಿ ಶಫಿ ಅಹ್ಮದ್ ಮಾತನಾಡಿ, ಕಡಿಮೆ ವೆಚ್ಚದಲ್ಲಿ ಹಜ್ ಅಥವಾ ಉಮ್ರಾ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗುವ ಬಣ್ಣ ಬಣ್ಣದ ಜಾಹೀರಾತುಗಳಿಗೆ ಯಾತ್ರಿಗಳು ಮರುಳಾಗಬಾರದು. ಇಂತಹ ಟೂರ್ ಆಪರೇಟರ್‌ಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕಿದ ಬಳಿಕವಷ್ಟೇ ಮುಂದುವರೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷ ಶೌಕತ್ ಅಲಿ ಸುಲ್ತಾನ್, ಜಂಟಿ ಕಾರ್ಯದರ್ಶಿ ಬಿ.ಎಸ್.ಮಖ್ಬೂಲ್, ಇರಾಕ್ ಹಾಗೂ ಜೋರ್ಡಾನ್‌ನ ಭಾರತದ ರಾಯಭಾರಿಯಾಗಿದ್ದ ಆರ್.ದಯಾಕರ್, ತಮಿಳುನಾಡು ಖಾಸಗಿ ಟೂರ್ ಆಪರೇಟರ್‌ಗಳ ಸಂಘದ ಅಧ್ಯಕ್ಷ ಮುಹಮ್ಮದ್ ರಫೀಕ್, ಆಂಧ್ರಪ್ರದೇಶ-ತೆಲಂಗಾಣ ರಾಜ್ಯಗಳ ಅಧ್ಯಕ್ಷ ಅಬ್ದುಲ್ಲಾ ಖಮರ್, ರಾಜ್ಯ ಹಜ್ ಸಮಿತಿಯ ಮಾಜಿ ಅಧ್ಯಕ್ಷ ಝುಲ್ಫೀಕರ್ ಟೀಪು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News